ಆಶಾ ಕಾರ್ಯಕರ್ತೆಯರಿಂದ ಪ್ರಕರಣ ಬೆಳಕಿಗೆ.. ಅಪ್ರಾಪ್ತೆ ಬಾಲಕಿಗೆ ಗರ್ಭಿಣಿ ಮಾಡಿದ್ದ ಐದು ಮಕ್ಕಳ ತಂದೆ ಅರೆಸ್ಟ್!
Views: 46
ಕನ್ನಡ ಕರಾವಳಿ ಸುದ್ದಿ: ಅಪ್ರಾಪ್ತೆಯ ಮೇಲಿನ ಲೈಂಗಿಕ ದೌರ್ಜನ್ಯ (ಪೋಕ್ಸೊ) ಪ್ರಕರಣವೊಂದರ ವಿಚಾರಣೆ ನಡೆಸಿದ ಇಲ್ಲಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಆರೋಪಿಗೆ 5 ವರ್ಷಗಳ ಸಾಧಾರಣ ಜೈಲು ಶಿಕ್ಷೆ ಹಾಗೂ ₹35,000 ದಂಡ ವಿಧಿಸಿ ತೀರ್ಪು ನೀಡಿದೆ.
ಕಡಬ ತಾಲೂಕಿನ ಕುದ್ಮಾರು ನಿವಾಸಿ ಅಬ್ದುಲ್ಲಾ (64) ಶಿಕ್ಷೆಗೆ ಒಳಗಾದ ವ್ಯಕ್ತಿ. ದಂಡದ ಮೊತ್ತವನ್ನು ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 6 ತಿಂಗಳ ಸಾಧಾರಣ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಧೀಶರಾದ ಸುಮಂಗಲ ಚಕಲಬ್ಬಿ ಅವರು ತಮ್ಮ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?
2022ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಕುದ್ಮಾರು ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಿಸಿದ ಆರೋಪದ ಮೇಲೆ ಅಬ್ದುಲ್ಲ ಎಂಬಾತನನ್ನು ಕಡಬ ಪೊಲೀಸರು ಬಂಧಿಸಿ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
ಗ್ರಾಮಕ್ಕೆ ಭೇಟಿ ನೀಡಿದ್ದ ಆಶಾ ಕಾರ್ಯಕರ್ತೆಯಿಂದ ಈ ದೌರ್ಜನ್ಯದ ವಿಚಾರ ಬೆಳಕಿಗೆ ಬಂದಿತ್ತು.
ಆಶಾ ಕಾರ್ಯಕರ್ತೆಯು ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಪರಿಶೀಲಿಸಿದಾಗ ಪ್ರಕರಣ ಬಹಿರಂಗಗೊಂಡಿತು.
ಆರೋಪಿಯ ವಿರುದ್ಧ ಐಪಿಸಿ ಕಲಂ 354(ಎ1), 506 ಹಾಗೂ ಪೋಕ್ಸೊ ಕಾಯ್ದೆ–2012ರ ಕಲಂ 8ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ನವೀನ್ ಚಂದ್ರ ಜೋಗಿ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಆರೋಪಿಯ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಶಿಕ್ಷೆ ಪ್ರಕಟಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಪುಷ್ಪರಾಜ್ ಅವರು ವಾದ ಮಂಡಿಸಿದ್ದರು.






