ಬಾಡಿಗೆಗಿದ್ದ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ:60 ವರ್ಷದ ಮನೆ ಮಾಲೀಕ ಅರೆಸ್ಟ್
Views: 29
ಕನ್ನಡ ಕರಾವಳಿ ಸುದ್ದಿ: ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ 60 ವರ್ಷದ ಮನೆ ಮಾಲೀಕನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಮಲೇಶ್ ಕುಮಾರ್ ಬಂಧಿತ ಆರೋಪಿ. ಆರೋಪಿಯ ಮಾಲಿಕತ್ವದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದ 20 ವರ್ಷದ ಕಾಲೇಜು ವಿದ್ಯಾರ್ಥಿನಿ ನೀಡಿದ ದೂರಿನನ್ವಯ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿ ಬಾಕಿ ಇದ್ದ ರಿಪೇರಿ ಕೆಲಸಗಳನ್ನು ಪರಿಶೀಲಿಸುವ ನೆಪದಲ್ಲಿ ಕಮಲೇಶ್ ಕುಮಾರ್ ಶನಿವಾರ ಸಂಜೆ ಸುಮಾರು 6:25ರ ಸುಮಾರಿಗೆ ವಿದ್ಯಾರ್ಥಿನಿ ವಾಸವಿದ್ದ ಮನೆಯೊಳಗೆ ಪ್ರವೇಶಿಸಿದ್ದಾನೆ. ಆರಂಭದಲ್ಲಿ ಯುವತಿಯ ಕಾಲೇಜು ಮತ್ತು ವಿದ್ಯಾಭ್ಯಾಸದ ಬಗ್ಗೆ ಮಾತುಕತೆ ನಡೆಸಿದ್ದಾನೆ. ಬಳಿಕ ಆಕೆಯ ಕೈಯಲ್ಲಿದ್ದ ಮೆಹಂದಿ ನೋಡುವ ನೆಪದಲ್ಲಿ ಕೈ ಹಿಡಿದು ತನ್ನತ್ತ ಎಳೆದುಕೊಂಡಿದ್ದಾನೆ. ತೀವ್ರವಾಗಿ ಪ್ರತಿರೋಧ ಒಡ್ಡಿದರೂ ಲೆಕ್ಕಿಸದೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಷ್ಟೇ ಅಲ್ಲದೆ, ಖಾಸಗಿಯಾಗಿ ಮತ್ತೆ ಭೇಟಿಯಾಗುವಂತೆ ಒತ್ತಾಯಿಸಿ ಅಸಭ್ಯವಾಗಿ ಮಾತನಾಡಿದ್ದಾನೆ ಎಂದು ನೊಂದ ವಿದ್ಯಾರ್ಥಿನಿ ದೂರಿನಲ್ಲಿ ವಿವರಿಸಿದ್ದಾರೆ.
ಘಟನೆಯಿಂದ ಆಘಾತಕ್ಕೊಳಗಾದ ವಿದ್ಯಾರ್ಥಿನಿ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್ 74 ಮತ್ತು 75(2)ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.






