ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ಪಿಲ್ಲರ್ ಕುಸಿದು ಬಿದ್ದು ಶಾಲಾ ಬಾಲಕ ಸಾವು
Views: 133
ಕನ್ನಡ ಕರಾವಳಿ ಸುದ್ದಿ: ಶಾಲೆ ಆರಂಭಕ್ಕೂ ಮುನ್ನ ಸ್ನೇಹಿತರೊಂದಿಗೆ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ಶಾಲೆಯ ಪಕ್ಕದಲ್ಲಿರುವ ಕಟ್ಟಡವೊಂದರ ಪಿಲ್ಲರ್ ಏಕಾಏಕಿ ಕುಸಿದು ಬಿದ್ದು ಶಾಲಾ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬೆಳಿಗೀಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಬಳಿಯಲ್ಲಿ ಇದ್ದ ಪಿಲ್ಲರ್ ವಿದ್ಯಾರ್ಥಿಯ ಮೇಲೆ ಬಿದ್ದಿದೆ.
ಬೆಳಿಗೀಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ನಾಲ್ಕನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಧನುಷ್ (10) ಮೃತ ದುರ್ದೈವಿ. ಹಾಲು ಉತ್ಪಾದಕರ ಸಹಕಾರ ಸಂಘದ ಬಳಿಯಲ್ಲಿ ಹಾಕಲಾಗಿದ್ದ ನಾಲ್ಕು ಪಿಲ್ಲರ್ ಗಳಿಗೆ ಯಾವುದೇ ಭದ್ರತೆ ಇರಲಿಲ್ಲ. ಶಾಲೆಯೂ ಪಕ್ಕದಲ್ಲಿ ಇದ್ದ ಕಾರಣ ವಿದ್ಯಾರ್ಥಿಗಳು ಅಲ್ಲಿಯೇ ಓಡಾಟ ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಪಿಲ್ಲರ್ ಬಿದ್ದಿದ್ದು ಮೂರು ವಿದ್ಯಾರ್ಥಿಗಳು ಪಾರಾಗಿದ್ದು ಒಬ್ಬ ವಿದ್ಯಾರ್ಥಿ ಸಿಲುಕಿ ಸಾವನ್ನಪ್ಪಿದ್ದಾನೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ಥಳಕ್ಕೆ ತಹಶೀಲ್ದಾರ್ ಮಮತಾ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






