ಇತರೆ

ಮನೆಯ ಬಾತ್‌ರೂಮ್‌ನಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆ:  ಕೊಲೆಯೋ..ಆಕಸ್ಮಿಕ ಸಾವಾ? ತೀವ್ರ ತನಿಖೆ 

Views: 58

ಕನ್ನಡ ಕರಾವಳಿ ಸುದ್ದಿ: ಬೆಂಗಳೂರಿನ ಹಾವನೂರು ಬಡಾವಣೆಯಲ್ಲಿರುವ ಮನೆಯೊಂದರಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದೆ. ಈ ಮನೆಯಲ್ಲಿ ವಾಸವಿದ್ದ ಒಂಟಿ ಮಹಿಳೆಯ ಅಸ್ಥಿಪಂಜರ ಇದಾಗಿದ್ದು, ಒಂದೂವರೆ ವರ್ಷದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು ಉತ್ತರ ತಾಲೂಕಿನ ಹಾವನೂರಿನಲ್ಲಿ ಏಕಾಂಗಿಯಾಗಿ ಮಹಿಳೆಯೊಬ್ಬರು ಮನೆಯಲ್ಲಿ ವಾಸಿಸುತ್ತಿದ್ದರು. ಇವರನ್ನು ದಾಕ್ಷಾಯಿಣಿ ಎಂದು ಸ್ಥಳೀಯರು ಗುರುತಿಸಿದ್ದಾರೆ.

ದಾಕ್ಷಾಯಿಣಿ ಒಂದೂವರೆ ವರ್ಷದ ಹಿಂದೆಯೇ ಮೃತಪಟ್ಟಿದ್ದು, ಇದೀಗ ಅವರ ಅಸ್ಥಿಪಂಜರ ಮಾತ್ರ ಉಳಿದುಕೊಂಡಿದೆ. ಹತ್ತು ವರ್ಷದ ಹಿಂದೆ ದಾಕ್ಷಾಯಿಣಿ ಅವರ ಪತಿ ಉಮೇಶ್ ಮೃತಪಟ್ಟಿದ್ದು, ಕೆಲ ವರ್ಷಗಳ ಹಿಂದೆ ಅವರ ಮಗನೂ ಮೃತಪಟ್ಟಿದ್ದಾರೆ ತದನಂತರ ದಾಕ್ಷಾಯಿಣಿ ಒಬ್ಬರೇ ವಾಸವಿದ್ದರು.

ಒಂದೂವರೆ ವರ್ಷದಿಂದ ತೆಗೆಯದ ಮನೆಯ ಬಾಗಿಲು ತೆಗೆದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಮನೆಯಲ್ಲಿ ಯಾರೂ ವಾಸವಿಲ್ಲ ಕಳ್ಳರು ಮನೆಗೆ ಎಂಟ್ರಿ ನೀಡಿರಬಹುದು ಎಂದು ತಿಳಿದುಕೊಂಡು ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಒಳಕ್ಕೆ ಬಂದಿದ್ದಾರೆ. ಮನೆಯ ಎಲ್ಲ ಕೋಣೆಗಳನ್ನು ಶೋಧಿಸಿದ್ದಾರೆ. ಆದರೆ ಏನೂ ಕಾಣಿಸಿಲ್ಲ. ಮನೆ ಪಾಳುಬಿದ್ದಂತೆ ಕಾಣಿಸಿದೆ. ತದನಂತರ ಕಡೆಯ ಬಾತ್‌ರೂಮ್‌ನ ಬಾಗಿಲು ತೆಗೆದಾಗ ಅಸ್ಥಿಪಂಜರವೊಂದು ಕಾಣಿಸಿದೆ.

ಒಂದೂವರೆ ವರ್ಷಗಳ ಸಮಯ ದಾಕ್ಷಾಯಿಣಿ ಕಾಣಿಸಲಿಲ್ಲ ಎಂದು ಯಾರೂ ಯಾಕೆ ಮನೆಯನ್ನು ಹುಡುಕಿಕೊಂಡು ಬಂದಿಲ್ಲ? ಇದು ಕೊಲೆಯಾ ಅಥವಾ ಆಕಸ್ಮಿಕ ಸಾವಾ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಅನೇಕರು ಸ್ನಾನಗೃಹದಲ್ಲಿ ಕಾಲು ಜಾರಿ ಬಿದ್ದು ತಲೆಗೆ ಪೆಟ್ಟಾಗಿ ಮೃತಪಡುತ್ತಾರೆ. ಇದು ಆ ರೀತಿ ಆಗಿರಬಹುದಾ ಅಥವಾ ಯಾರಾದರೂ ಚಿನ್ನ ಹಣಕ್ಕಾಗಿ, ದ್ವೇಷಕ್ಕಾಗಿ ಕೊಂದಿದ್ದಾರಾ ತಿಳಿದುಬಂದಿಲ್ಲ. ಈ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Back to top button
error: Content is protected !!