ಅಪಘಾತದಲ್ಲಿ ಯುವತಿ ಸಾವು; ಹುಟ್ಟುಹಬ್ಬ ಆಚರಣೆಗೆಂದು ಕರೆದು ರೇಪ್‌ಗೆ ಯತ್ನಿಸಿ ಕೊಲೆ: ಪೋಷಕರ ಗಂಭೀರ ಆರೋಪ!
Views: 101
ಕನ್ನಡ ಕರಾವಳಿ ಸುದ್ದಿ: ಕಾರು ಅಪಘಾತದಲ್ಲಿ ಯುವತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಹುಟ್ಟುಹಬ್ಬ ಆಚರಣೆಗೆಂದು ಕರೆದು ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ್ದಾರೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಮೃತಪಟ್ಟ ಯುವತಿಯನ್ನು ಹೊನ್ನೆಮಡು ಗ್ರಾಮದ 19 ವರ್ಷದ ನವೀನಾ ಎಂದು ಗುರುತಿಸಲಾಗಿದ್ದು, ಮಂಡ್ಯ ನಗರದ ಹಣ್ಣಿನ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡು ಪಿಜಿಯಲ್ಲಿ ವಾಸವಿದ್ದರು ಎನ್ನಲಾಗಿದೆ.
ಕಳೆದ ಭಾನುವಾರ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಅಂದು ಮನೆಗೆ ಹೋಗುವುದಾಗಿ ಪಿಜಿ ಮಾಲೀಕರಿಗೆ ತಿಳಿಸಿದ್ದ ನವೀನಾ, ತನ್ನ ಸ್ನೇಹಿತರಾದ ಅಶ್ವಿನಿ, ವಿಷ್ಣು ಹಾಗೂ ಶಿವಕುಮಾರ್ ಜೊತೆ ಕೊಮ್ಮೇರಹಳ್ಳಿ ಬೆಟ್ಟಕ್ಕೆ ಕಾರಿನಲ್ಲಿ ತೆರಳಿದ್ದಳು.
ಈ ವೇಳೆ ಕೊಮ್ಮೇರಹಳ್ಳಿ ಬಳಿ ಕಾರು ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಈ ಘಟನೆಯಲ್ಲಿ ನವೀನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಉಳಿದ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಈ ಅಪಘಾತಕ್ಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಂಜೆ ನಡೆದ ಅಪಘಾತದ ಬಗ್ಗೆ ರಾತ್ರಿ 11 ಗಂಟೆಯ ಸುಮಾರಿಗೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ. ಇದೇ ವಿಷಯ ಈಗ ಮೃತಳ ಕುಟುಂಬಸ್ಥರಲ್ಲಿ ಅನುಮಾನ ಮೂಡಿಸಿದೆ. ಮೇಲ್ನೋಟಕ್ಕೆ ಇದು ಅಪಘಾತದಂತೆ ಕಂಡರೂ, ಕೊಲೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಹುಟ್ಟುಹಬ್ಬ ಆಚರಣೆ ನೆಪದಲ್ಲಿ ಕರೆದೊಯ್ದ ಸ್ನೇಹಿತರೇ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ನವೀನಾ ಇದಕ್ಕೆ ಒಪ್ಪದಿದ್ದಾಗ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಬಳಿಕ ಅಪಘಾತವೆಂದು ಬಿಂಬಿಸಿದ್ದಾರೆ. ಕೊಲೆ ಮಾಡಿದ ನಂತರ ನವೀನಾಳ ಶವವನ್ನು ಕಾರಿನ ಮುಂಭಾಗದ ಸೀಟಿನಲ್ಲಿ ಕೂರಿಸಿ, ಲೈಟ್ ಕಂಬಕ್ಕೆ ಡಿಕ್ಕಿ ಹೊಡೆಸಿದ್ದಾರೆ ಎಂದು ನವೀನಾಳ ತಾಯಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.






