ಕುಂದಾಪುರ: ಕೋಳಿ ಅಂಕ ಜೂಜಾಟದ ಅಡ್ಡೆಯ ಮೇಲೆ ಪೊಲೀಸರ ದಾಳಿ, ಇಬ್ಬರ ಬಂಧನ
Views: 195
ಕನ್ನಡ ಕರಾವಳಿ ಸುದ್ದಿ: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡಾ ಗ್ರಾಮದ ಕೊಳ್ಳೆಯ ನಂದ್ರೋಳಿ ಎಂಬಲ್ಲಿನ ಸಾರ್ವಜನಿಕ ಹಾಡಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕ ಜೂಜಾಟದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ, 10 ಕೋಳಿ ಹುಂಜಗಳು ಹಾಗೂ 8 ಮೋಟಾರು ಸೈಕಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಕೋಳಿಗಳ ಕಾಲಿಗೆ ಕತ್ತಿ ಕಟ್ಟಿ ಹಣವನ್ನು ಪಣವಾಗಿಟ್ಟು ಜೂಜಾಟವಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ ಪೊಲೀಸರು ಜೂಜಾಟದ ಅಡ್ಡೆಯ ಮೇಲೆ ದಾಳಿ ನಡೆಸಿದರು. ಪೊಲೀಸರು ದಾಳಿ ಮಾಡುತ್ತಿದ್ದಂತೆಯೇ ಸ್ಥಳದಲ್ಲಿದ್ದ ಬಹುತೇಕರು ಕಾಲ್ಕಿತ್ತಿದ್ದು ಕೋಳಿ ಅಂಕದಲ್ಲಿ ನಿರತರಾಗಿದ್ದ ಇಬ್ಬರನ್ನು ಸ್ಥಳದಲ್ಲೇ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಬೈಂದೂರು ತಾಲೂಕಿನ ಹಳಗೇರಿ ಕಂಬದಕೋಣೆ ಗ್ರಾಮದ ಸುಧಾಕರ (61) ಮತ್ತು ಕಿರಿಮಂಜೇಶ್ವರ ಗ್ರಾಮದ ಸುರೇಶ (40) ಎಂದು ಗುರುತಿಸಲಾಗಿದೆ.
ಘಟನಾ ಸ್ಥಳದಿಂದ ಜೂಜಾಟಕ್ಕೆ ಬಳಸಿದ್ದ 10 ಕೋಳಿ ಹುಂಜಗಳು, 4 ಕೋಳಿಬಾಳುಗಳು (ಕತ್ತಿ), ಕತ್ತಿ ಕಟ್ಟಲು ಬಳಸಿದ್ದ 5 ಹಗ್ಗಗಳು, ರೂ.2,350 ನಗದು ಹಣ ಹಾಗೂ 8 ಮೋಟಾರು ಸೈಕಲ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಕೋಳಿಗಳಿಗೆ ಸರಿಯಾಗಿ ಆಹಾರ ಮತ್ತು ನೀರು ನೀಡದೆ, ಕಾಲಿಗೆ ಕತ್ತಿ ಕಟ್ಟಿ ಹಿಂಸಿಸಿ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದರು. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






