ಇತರೆ

ಗಂಡ ಸಿಗಲಿಲ್ಲವೆಂದು ಮಾವನನ್ನೇ ಕೊಂದ ಪ್ರಿಯಕರ!

Views: 50

ಕನ್ನಡ ಕರಾವಳಿ ಸುದ್ದಿ: ಪ್ರಿಯಕರನ ವ್ಯಾಮೋಹಕ್ಕೆ ಬಿದ್ದು ಗಂಡನನ್ನು ಕೊಲ್ಲಲು ಸಂಚು ರೂಪಿಸಿದ್ದ ಹೆಂಡತಿಯ ಕುತಂತ್ರಕ್ಕೆ ಕೊನೆಗೆ ಮಾವನೇ ಪ್ರಾಣ ತೆರಬೇಕಾಯಿತು.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ಶ್ರೀನಿವಾಸುಲು ಮತ್ತು ಮಮತಾ ದಂಪತಿ ಜೀವನೋಪಾಯಕ್ಕಾಗಿ ಹೈದರಾಬಾದ್‌ನ ಬಾಲಾನಗರದಲ್ಲಿ ವಾಸವಾಗಿದ್ದರು. ಏಳು ವರ್ಷಗಳ ಹಿಂದೆ ಇವರ ಮದುವೆಯಾಗಿತ್ತು. ಕಳೆದ ಒಂದು ವರ್ಷದಿಂದ ಮಮತಾಗೆ ಅದೇ ಪ್ರದೇಶದ ಶ್ರೀಶೈಲಂ ಎಂಬ ವ್ಯಕ್ತಿಯ ಪರಿಚಯವಾಗಿ, ಅದು ಕ್ರಮೇಣ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಈ ವಿಷಯ ತಿಳಿದ ಪತಿ ಶ್ರೀನಿವಾಸುಲು ಹಲವು ಬಾರಿ ಪತ್ನಿಯನ್ನು ತಿದ್ದಲು ಯತ್ನಿಸಿದ್ದರಿಂದ ಕುಟುಂಬದಲ್ಲಿ ಪ್ರತಿದಿನ ಜಗಳ ನಡೆಯುತ್ತಿತ್ತು. ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿಯನ್ನೂ ನಡೆಸಲಾಗಿತ್ತು.

ಪರಿಸ್ಥಿತಿ ಮಿತಿಮೀರಿದಾಗ ಒಮ್ಮೆ ಶ್ರೀನಿವಾಸುಲು ಪತ್ನಿಯ ಮೇಲೆ ಕತ್ತಿಯಿಂದ ದಾಳಿ ನಡೆಸಿ ಗಾಯಗೊಳಿಸಿದ್ದ. ಈ ಬಗ್ಗೆ ಮಮತಾ ಪೊಲೀಸರಿಗೆ ದೂರು ನೀಡಿದ್ದರಿಂದ ಶ್ರೀನಿವಾಸುಲು ಜೈಲು ಪಾಲಾಗಿದ್ದ. ನಂತರ ಆತನ ತಂದೆ ಮೇಘಾ ನಾಯಕ್ ಜಾಮೀನು ಪಡೆದು ಮಗನನ್ನು ಜೈಲಿನಿಂದ ಬಿಡುಗಡೆ ಮಾಡಿಸಿದ್ದರು. ಜೈಲಿನಿಂದ ಹೊರಬಂದ ಮೇಲೆಯೂ ಶ್ರೀನಿವಾಸುಲು ಮತ್ತು ಪ್ರಿಯಕರ ಶ್ರೀಶೈಲಂ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿದ್ದವು. ಇದರಿಂದಾಗಿ ಗಂಡನನ್ನು ದಾರಿಯಿಂದ ತಪ್ಪಿಸಲು ಮಮತಾ ನಿರ್ಧರಿಸಿದಳು.

ಗಂಡ ಸಿಗಲಿಲ್ಲವೆಂದು ಮಾವನನ್ನೇ ಕೊಂದ ಪ್ರಿಯಕರ!

ಈ ತಿಂಗಳ 25 ರಂದು ಶ್ರೀನಿವಾಸುಲು ತನ್ನ ಸ್ವಗ್ರಾಮಕ್ಕೆ ತೆರಳಿದ ವಿಷಯ ತಿಳಿದ ಮಮತಾ, ತಕ್ಷಣವೇ ಪ್ರಿಯಕರ ಶ್ರೀಶೈಲಂಗೆ ಮಾಹಿತಿ ನೀಡಿದ್ದಳು. ಮಧ್ಯರಾತ್ರಿ ಮನೆಗೆ ನುಗ್ಗಿ ಶ್ರೀನಿವಾಸುಲುವನ್ನು ಕೊಲೆ ಮಾಡಲು ಇಬ್ಬರೂ ಪ್ಲಾನ್ ಮಾಡಿದ್ದರು.

ಆದರೆ ಗ್ರಾಮದ ಮನೆಗೆ ತಲುಪಿದ ಶ್ರೀಶೈಲಂಗೆ ಶ್ರೀನಿವಾಸುಲು ಕಾಣಿಸಲಿಲ್ಲ. ಅಲ್ಲಿ ಆತನ ತಂದೆ ಮೇಘಾ ನಾಯಕ್ ಮಾತ್ರ ನಿದ್ರಿಸುತ್ತಿದ್ದರು. ಈ ವಿಷಯವನ್ನು ಶ್ರೀಶೈಲಂ ಫೋನ್ ಮಾಡಿ ಮಮತಾಗೆ ತಿಳಿಸಿದಾಗ, “ಮಾವನನ್ನೇ ಕೊಂದುಬಿಡು! ತಂದೆಯ ಕೊಲೆಯಾದ್ರೆ ನನ್ನ ಗಂಡ ಹೆದರಿ ನಮ್ಮ ತಂಟೆಗೆ ಬರುವುದಿಲ್ಲ, ಆತನನ್ನು ಮುಗಿಸಿಬಿಡು” ಎಂದು ಆಕೆ ರಕ್ಕಸ ಆಲೋಚನೆ ನೀಡಿದ್ದಾಳೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

ಅದರಂತೆ ಶ್ರೀಶೈಲಂ ಮನೆಯಲ್ಲಿ ನಿದ್ರಿಸುತ್ತಿದ್ದ ವೃದ್ಧ ಮೇಘಾ ನಾಯಕ್ ಅವರ ಮೇಲೆ ಕತ್ತಿಯಿಂದ ದಾಳಿ ನಡೆಸಿ, ಕುತ್ತಿಗೆ ಕೊಯ್ದು ಭೀಕರವಾಗಿ ಹತ್ಯೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದ. ಬಳಿಕ ಬೈಕ್‌ನಲ್ಲಿ ಹೈದರಾಬಾದ್‌ಗೆ ತಲುಪಿದ್ದ.

ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಾಂತ್ರಿಕ ಹಾಗೂ ವೈಜ್ಞಾನಿಕ ಆಧಾರಗಳ ನೆರವಿನಿಂದ ತನಿಖೆ ಆರಂಭಿಸಿದರು. ಅನುಮಾನಾಸ್ಪದವಾಗಿ ಕಂಡುಬಂದ ಮಮತಾ ಮತ್ತು ಶ್ರೀಶೈಲಂ ಅವರನ್ನು ಬಾಲಾನಗರದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಅವರು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ವನಪರ್ತಿ ಡಿಎಸ್‌ಪಿ ಗಿರಿಬಾಬು ತಿಳಿಸಿದ್ದಾರೆ.

ಕೊಲೆಗೆ ಬಳಸಿದ ಕತ್ತಿ ಹಾಗೂ ಇತರೆ ಸಾಕ್ಷ್ಯಾಧಾರಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಇಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

Related Articles

Back to top button
error: Content is protected !!