ಇತರೆ

ಮಂಗಳೂರು: ಗ್ರೂಪ್ ಡಿ ನೌಕರೆಗೆ ಎಪಿಎಂಸಿ ಅಧಿಕಾರಿ ಲೈಂಗಿಕ ಕಿರುಕುಳ,ಕಚೇರಿಗೆ ತೆರಳಿ ಮ‌ಹಿಳೆಯರಿಂದ ತರಾಟೆ

Views: 30

ಕನ್ನಡ ಕರಾವಳಿ ಸುದ್ದಿ: ಗ್ರೂಪ್ ಡಿ ನೌಕರೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರ ನೇತೃತ್ವದ ಮಹಿಳೆಯರ ತಂಡವೊಂದು ಎಪಿಎಂಸಿ ಕಚೇರಿಗೆ ತೆರಳಿ ಕಾರ್ಯದರ್ಶಿ ಸಿ.ಎಚ್. ಮೋಹನ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಕಳೆದ 2.5 ವರ್ಷಗಳಿಂದ ಎಪಿಎಂಸಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಗ್ರೂಪ್ ಡಿ ನೌಕರೆಯಾಗಿ ಕೆಲಸ ಮಾಡುತ್ತಿರುವ ಮಹಿಳೆ ಈ ಆರೋಪ ಮಾಡಿದ್ದಾರೆ. ಆರೋಪಿಯು ದೈಹಿಕವಾಗಿ ಮುಟ್ಟುವುದು, ಅಸಹ್ಯವಾಗಿ ವರ್ತಿಸುವುದು ಹಾಗೂ ತನ್ನ ಬೇಡಿಕೆಗೆ ಸಹಕರಿಸುವಂತೆ ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತೆ ದೂರಿದ್ದಾರೆ.

ತಿಂಗಳಿಗೆ 15000 ರೂ. ಸಂಬಳಕ್ಕೆ ಕೆಲಸ ಮಾಡುತ್ತಿದ್ದ ತನಗೆ, ತನ್ನ ಬೇಡಿಕೆಗೆ ಒಪ್ಪಿದರೆ 25000 ರೂ. ಮಾಡಿಕೊಡುವುದಾಗಿ ಆರೋಪಿ ಆಮಿಷ ಒಡ್ಡಿದ್ದ. ತಾನು ಇದಕ್ಕೆ ಒಪ್ಪದ ಕಾರಣಕ್ಕೆ ಶೌಚಾಲಯ ತೊಳೆಯುವ ಕೆಲಸಕ್ಕೆ ಹಾಕಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ. ಶನಿವಾರ ಆರೋಪಿ ಕರೆ ಮಾಡಿ, ತನ್ನ ಬೇಡಿಕೆಗೆ ಸಮ್ಮತಿಯಿದ್ದರೆ ಹಸಿರು ಸೀರೆ ಉಟ್ಟು ಬರುವಂತೆ ಸೂಚಿಸಿದ್ದ ಎಂದು ಸಂತ್ರಸ್ತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರತಿಭಾ ಕುಳಾಯಿ ನೇತೃತ್ವದ ಮಹಿಳೆಯರ ತಂಡ ಹಸಿರು ಸೀರೆ ಧರಿಸಿ ಎಪಿಎಂಸಿ ಕಚೇರಿಗೆ ಮುತ್ತಿಗೆ ಹಾಕಿ ಕಾರ್ಯದರ್ಶಿ ಸಿ.ಎಚ್. ಮೋಹನ್ ಅವರನ್ನು ತರಾಟೆಗೆ ತೆಗೆದುಕೊಂಡಿತು.

ಈ ವೇಳೆ ಆರೋಪಿ ‘”ತಾನು ಏನೂ ಮಾಡಿಲ್ಲ, ನ್ಯಾಯಯುತವಾಗಿ ಕೆಲಸ ನೀಡಿ ಸಂಬಳ ಕೊಟ್ಟಿದ್ದೇನೆ” ಎಂದು ಹೇಳಿದಾಗ ಕೆರಳಿದ ಮಹಿಳೆಯರು, “ನೀನೇನು ನಿನ್ನ ಮನೆಯಿಂದ ಕೆಲಸ ಕೊಟ್ಟಿದ್ದೀಯಾ? ಸ್ವಂತ ಜೇಬಿನಿಂದ ಸಂಬಳ ಕೊಡುತ್ತಿದ್ದೀಯಾ?” ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಈ ಬಗ್ಗೆ ಎಸಿಪಿ ಅವರಿಗೆ ದೂರು ನೀಡುವುದಾಗಿ ತಿಳಿಸಿದರು.

ಬಳಿಕ ಪಣಂಬೂರು ಪೊಲೀಸ್ ಠಾಣೆಯ ಉಪನಿರೀಕ್ಷಕರು ಹಾಗೂ ಪೊಲೀಸ್‌ ತಂಡ ಸ್ಥಳಕ್ಕೆ ಆಗಮಿಸಿದ್ದು, ಸಂತ್ರಸ್ತೆಯಿಂದ ದೂರು ಸ್ವೀಕರಿಸಿ ಮುಂದಿನ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

Related Articles

Back to top button
error: Content is protected !!