ಇತರೆ

ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕಾರ್ಮಿಕರು ಸಾವು

Views: 36

ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಾಪಟ್ಟಣ ಗ್ರಾಮದ ಸಮೀಪದ ಕಾವೇರಿ ಕಂಪನಿಗೆ ಸೇರಿದ ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಬಿಹಾರ ಮೂಲದ ಏಳು ಕಾರ್ಮಿಕರು ಸಾವಿಗೀಡಾಗಿರುವ ಭೀಕರ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.

ದುರಂತ ಸಂಭವಿಸಿದ ವೇಳೆ ಕಾರ್ಮಿಕರು ಕ್ವಾರಿಯ ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದು, ಮೇಲ್ಭಾಗದಲ್ಲಿ ಹಿಟಾಚಿ ಯಂತ್ರದ ಮೂಲಕ ಬಂಡೆ ತೆರವು ಕಾರ್ಯ ನಡೆಯುತ್ತಿತ್ತು.

ಸುಮಾರು 100 ಅಡಿ ಎತ್ತರದ ಪ್ರದೇಶದಲ್ಲಿ ಹೊಸ ಕ್ರಷರ್ ಘಟಕಕ್ಕೆ ಜಾಗ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದ್ದ ವೇಳೆ ಮೇಲಿನಿಂದ ಬಂಡೆ ಕುಸಿದು ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಯ ಬಳಿಕ ಸ್ಥಳಕ್ಕೆ ತಾವರೆಕೆರೆ ಪೊಲೀಸರು, ರಕ್ಷಣಾ ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯರ ಮಾಹಿತಿ ಪ್ರಕಾರ, ಕ್ವಾರಿಯಲ್ಲಿ ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ಪಾಲಿಸದೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಇದೇ ವೇಳೆ ಬಂಡೆ ಒಡೆಯಲು ಜಿಲೆಟಿನ್ ಸ್ಫೋಟಕಗಳನ್ನು ಬಳಸಲಾಗಿದ್ದು, ಸ್ಫೋಟದ ತೀವ್ರತೆಯಿಂದ ಬಂಡೆ ಕುಸಿದಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತೇ ಎಂಬ ಆಯಾಮದಲ್ಲಿಯೂ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಮೃತ ಕಾರ್ಮಿಕರ ಗುರುತಿನ ಪರಿಶೀಲನೆ ನಡೆಯುತ್ತಿದ್ದು, ಬಂಡೆ ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆ ಇರುವುದರಿಂದ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಘಟನೆಗೆ ಸಂಬಂಧಿಸಿದಂತೆ ಹಿಟಾಚಿ ಚಾಲಕ ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ನಿರ್ಲಕ್ಷ್ಯದ ಆರೋಪ ಕೇಳಿಬಂದಿದ್ದು, ಪೊಲೀಸ್ ತನಿಖೆಯ ಬಳಿಕ ಸ್ಪಷ್ಟ ಚಿತ್ರಣ ಹೊರಬರುವ ನಿರೀಕ್ಷೆಯಿದೆ.

Related Articles

Back to top button
error: Content is protected !!