ಯುವಜನ

ಪ್ರೇಮಿಗಳಿಬ್ಬರು ಸೇರಿ ತಂದೆ-ತಾಯಿ, ತಂಗಿಯ ಹತ್ಯೆ

Views: 51

ಕನ್ನಡ ಕರಾವಳಿ ಸುದ್ದಿ: ತನ್ನ ಪ್ರೀತಿಗೆ ಹಾಗೂ ಪ್ರಿಯಕರನ ಜೊತೆ ವಾಸ ಮಾಡುತ್ತಿದ್ದುದನ್ನು ವಿರೋಧಿಸಿದ್ದಕ್ಕಾಗಿ ಮಗಳು ತನ್ನ ಪ್ರಿಯಕರನ ಜೊತೆ ಸೇರಿ ತಂದೆ ತಾಯಿ ಹಾಗೂ ತಂಗಿಯನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಕೆ.ಆರ್. ಪುರದ ಸೀಗೆಹಳ್ಳಿಯಲ್ಲಿ ವಾಸವಿದ್ದ ಸೋಮಸುಂದರ್ (55), ಮುತ್ತುಲಕ್ಷ್ಮಿ (48) ಹಾಗೂ ಇವರ ಕಿರಿಯ ಮಗಳು ಸುಪ್ರಿಯಾ (19) ಕೊಲೆಯಾದ ದುರ್ದೈವಿಗಳು.

ಸೋಮಸುಂದರ್ ಅವರ ಹಿರಿಯ ಮಗಳು ಶ್ವೇತಾ ಹಾಗೂ ಆಕೆಯ ಪ್ರಿಯಕರ ಕೆನತ್ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಆರೋಪಿ ಶ್ವೇತಾ, ಕೆನತ್ ಎಂಬಾತನ ಜೊತೆ ಮದುವೆಯಾಗದೆ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದಳು.

ಮಗಳ ಈ ನಡವಳಿಕೆಗೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಮಗಳಿಗೆ ಬುದ್ಧಿವಾದ ಹೇಳಿ ಮನೆಗೆ ವಾಪಸ್ ಕರೆದುಕೊಂಡು ಹೋಗಲು ಸೋಮಸುಂದರ್ ಅವರು ಪತ್ನಿ ಮತ್ತು ಕಿರಿಯ ಮಗಳೊಂದಿಗೆ ಸಿಗೇಹಳ್ಳಿಯ ಡಾಮ್ನಿಕದ ಲೇಔಟ್‌ನಲ್ಲಿರುವ ‘ಸಾಯಿ ಗ್ರೀನ್ ಅಪಾರ್ಟ್ಮೆಂಟ್’ಗೆ ಬಂದಿದ್ದರು.

ಈ ವೇಳೆ ಪೋಷಕರು ಹಾಗೂ ಶ್ವೇತಾ-ಕೆನತ್ ಜೋಡಿ ನಡುವೆ ತೀವ್ರ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದಾಗ ಪ್ರೇಮಿಗಳಿಬ್ಬರು ಸೇರಿ ತಂದೆ, ತಾಯಿ ಹಾಗೂ ತಂಗಿಯ ಮೇಲೆ ಚಾಕುವಿನಿಂದ ಮನಸೋಇಚ್ಛೆ ಇರಿದಿದ್ದಾರೆ.

ಇದರಿಂದ ಮುತ್ತುಲಕ್ಷ್ಮಿ ಹಾಗೂ ಸುಪ್ರಿಯಾ ಮನೆಯ ಒಳಗಡೆಯೇ ರಕ್ತದ ಮಡುವಿನಲ್ಲಿ ಕುಸಿದುಬಿದ್ದು ಪ್ರಾಣ ಬಿಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ತಂದೆ ಸೋಮಸುಂದರ್ ಅಲ್ಲಿಂದ ತಪ್ಪಿಸಿಕೊಂಡು ಹೊರಗೆ ಬಂದಿದ್ದಾರೆ.

ಆದರೆ, ತೀವ್ರವಾಗಿ ಗಾಯಗೊಂಡು ಮೆಟ್ಟಿಲುಗಳ ಮೇಲೆ ಕುಸಿದಿದ್ದಾರೆ. ಇದನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದರಾದರೂ ಸೋಮಸುಂದರ್ ಮಾರ್ಗ ಮಧ್ಯೆಯೆ ಕೊನೆಯುಸಿರೆಳೆದಿದ್ದಾರೆ. ಪರಾರಿಯಾಗಿರುವ ಶ್ವೇತಾ ಮತ್ತು ಕೆನತ್ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.

Related Articles

Back to top button
error: Content is protected !!