ಅಕ್ರಮ ಸಂಬಂಧಕ್ಕೆ ಅಡ್ಡಿ: ಪತ್ನಿಗೆ ವಿಷ ಕುಡಿಸಿ ಕೊಲೆ ಮಾಡಿದ ನಂತರ ಆಕ್ಸಿಡೆಂಟ್ ಅಂತಾ ಬಿಂಬಿಸಿದ್ದ ಪತಿ ಅರೆಸ್ಟ್..!
Views: 55
ಕನ್ನಡ ಕರಾವಳಿ ಸುದ್ದಿ: ಸಂಬಂಧಕ್ಕೆ ಅಡ್ಡಿಯಾಗಿದ್ದ ತನ್ನ ಹೆಂಡತಿಗೆ ಗಂಡನೇ ವಿಷ ಕುಡಿಸಿ, ಕತ್ತು ಹಿಸುಕಿ ಕೊಲೆ ಮಾಡಿ, ರಸ್ತೆ ಅಪಘಾತದಿಂದ ಮೃತಪಟ್ಟಿದ್ದಾಳೆ ಅಂತಾ ಬಿಂಬಿಸಿದ್ದ ಪ್ರಕರಣವನ್ನು ಗೋಕಾಕ್ ಗ್ರಾಮೀಣ ಠಾಣೆ ಪೊಲೀಸರು ಭೇದಿಸಿದ್ದಾರೆ.
ಘಟನೆಯ ಹಿನ್ನೆಲೆ – ಎಫ್ಐಆರ್ ನಲ್ಲಿ ಇರುವಂತೆ: ಗೋಕಾಕ್ ತಾಲೂಕಿನ ಶಿಂಧಿ ಕುರಬೇಟ್ ಗ್ರಾಮದ ಸಕ್ಕುಬಾಯಿ ಸಂತೋಷ ಪಟಾಯತ(32) ಮೃತ ಮಹಿಳೆ. ಸಂತೋಷ ರೇವಣ್ಣ ಪಟಾಯತ (36) ಕೊಲೆಗೈದ ಪತಿ. ಸಂತೋಷ ಟೈಲ್ಸ್ ಪಿಟ್ಟಿಂಗ್ ಕೆಲಸ ಮಾಡುತ್ತಿದ್ದ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಗಂಡ ಸಂತೋಷ ಬೇರೆ ಮಹಿಳೆ ಜೊತೆಗೆ ಅನೈತಿಕ ಸಂಬಂಧ ಹೊಂದಿರುವ ವಿಚಾರ ಸಕ್ಕುಬಾಯಿ ಅವರಿಗೆ ಗೊತ್ತಾಗಿತ್ತು. ಆ ಬಳಿಕ ಸಕ್ಕುಬಾಯಿ ತನ್ನ ತವರು ಮನೆಯವರಿಗೆ ಈ ವಿಷಯ ತಿಳಿಸುತ್ತೇನೆ ಅಂತಾ ಹೇಳಿದ್ದರು. ಅಲ್ಲದೇ ತನ್ನ ಅಕ್ರಮ ಸಂಬಂಧಕ್ಕೆ ಪತ್ನಿ ಅಡ್ಡಿ ಆಗುತ್ತಿದ್ದು, ಈಕೆಯನ್ನು ಕೊಲೆ ಮಾಡಲೇಬೇಕು ಅಂತಾ ನಿರ್ಧರಿಸಿ, ಜೂನ್ 12ರಂದು ಬೈಲಹೊಂಗಲ ತಾಲೂಕಿನ ಮರಕುಂಬಿ ಬಳಿಯ ಚೌಡೇಶ್ವರಿ ದೇವಿಗೆ ಹೋಗಿ ಬರೋಣ ಬಾ ಅಂತಾ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದಾನೆ.
ಮರಳಿ ಬರುವಾಗ ಮುರಗೋಡ-ಶಿಲ್ತಿಭಾವಿ ಬಳಿ ರಾತ್ರಿ 9 ಗಂಟೆ ಸುಮಾರಿಗೆ ಬೈಕ್ ನಿಲ್ಲಿಸಿ, ಮೊದಲೇ ವಿಷಕಾರಿ ಔಷಧ ಮತ್ತು ಪೌಡರ್ ಹಾಕಿಟ್ಟಿದ್ದ ಜೀರಾ ಕೋಲ್ಡ್ರೀಂಕ್ಸ್ ಕುಡಿಯಲು ಕೊಟ್ಟಿದ್ದಾನೆ. ಅದನ್ನು ಕುಡಿದ ಸ್ವಲ್ಪ ಹೊತ್ತಿನಲ್ಲೆ ಸಕ್ಕುಬಾಯಿಗೆ ವಾಂತಿ ಶುರುವಾಗಿದೆ. ಸ್ವಲ್ಪ ಮುಂದೆ ಕರೆದುಕೊಂಡು ಹೋಗಿ, ರಸ್ತೆ ಪಕ್ಕದ ತೆಗ್ಗಿನಲ್ಲಿ ಮಲಗಿಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಸಕ್ಕುಬಾಯಿ ಅವರ ಮೇಲೆ ಬೈಕ್ ಬೀಳಿಸಿ, ತಾನು ತನ ಸಹ ಪ್ರಜ್ಞೆ ತಪ್ಪಿದಂತೆ ಬಿದ್ದಿದ್ದಾನೆ. ಯಾರೂ ಸಹ ಇದನ್ನು ಗಮನಿಸದೇ ಇದ್ದಾಗ, ರಾತ್ರಿ 12 ಗಂಟೆ ಸುಮಾರಿಗೆ 112 ನಂಬರ್ಗೆ ಕರೆ ಮಾಡಿ ಸ್ಥಳಕ್ಕೆ ಆಂಬ್ಯುಲೆನ್ಸ್ ಕರೆಸಿಕೊಂಡಿದ್ದಾನೆ. ಆಂಬ್ಯುಲೆನ್ಸ್ ಸಿಬ್ಬಂದಿ ಬರುತ್ತಿದ್ದಂತೆ ತನಗೆ ಪೆಟ್ಟಾದಂತೆ ನಟಿಸಿದ್ದಾನೆ. ಅಲ್ಲದೇ ನನ್ನ ಪತ್ನಿಗೆ ಗಾಯವಾಗಿ ಮೃತಪಟ್ಟಿದ್ದಾಳೆ ಅಂತಾ ಹೇಳುತ್ತಾನೆ. ಸಕ್ಕುಬಾಯಿ ಮೃತದೇಹ ಮತ್ತು ಸಂತೋಷನನ್ನು ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬರಲಾಗಿತ್ತು ಎಂದು ಎಫ್ಐಆರ್ ನಲ್ಲಿ ವಿವರಿಸಲಾಗಿದೆ.
ಮನೆಯವರಿಗೆ ರಸ್ತೆ ಅಪಘಾತ ಆಗಿದೆ ಅಂತಾ ಹೇಳಿ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದ. ಆದರೆ, ಸಂತೋಷನ ಮೇಲೆ ಅನುಮಾನ ಬಂದು, ಸಕ್ಕುಬಾಯಿ ತಾಯಿ ಧಾರವಾಡ ಜಿಲ್ಲೆಯ ಕಲ್ಲೂರ ಗ್ರಾಮದ ಉಡಚವ್ವ ಪುಂಡಲೀಕ ಘೋಡಗೇರ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿ ಸಂತೋಷ ಪಟಾಯತ್ ನನ್ನು ವಿಚಾರಣೆಗೆ ಒಳಪಡಿಸಿದಾಗ ನೈಜ ಸಂಗತಿ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಜೈಲಿಗೆ ರವಾನಿಸಿದ್ದಾರೆ.






