ದಿನಕ್ಕೆ 3 ಬಾಟಲ್ ಸ್ಟಿಂಗ್ ಜ್ಯೂಸ್ ಕುಡೀತಿದ್ದವ ಕಿಡ್ನಿ ಫೇಲಾಗಿ ಸಾವು
Views: 50
ಕನ್ನಡ ಕರಾವಳಿ ಸುದ್ದಿ: ದಿನಕ್ಕೆ 3ರಿಂದ 4 ಬಾಟಲಿ ಸ್ಟಿಂಗ್ ಜ್ಯೂಸ್ ಕುಡಿಯುತ್ತಿದ್ದ ಯುವಕನೊಬ್ಬ ಕಿಡ್ನಿ ವೈಫಲ್ಯವಾಗಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ.
ಬಾಲು ದೇಸಾಯಿ (19) ಮೃತ ಯುವಕ. ಈ ಯುವಕ ಕಳೆದ ಹಲವು ದಿನಗಳಿಂದ ಸ್ಟಿಂಗ್ ಜ್ಯೂಸ್ ಅನ್ನು ಅತಿಯಾಗಿ ಸೇವನೆ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಬಾಲು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ವ್ಯಾಸಾಂಗ ಮಾಡುತ್ತಿದ್ದ. ಪ್ರತಿದಿನ 3 ರಿಂದ 4 ಬಾಟಲಿ ಸ್ಟಿಂಗ್ ಜ್ಯೂಸ್ ಕುಡಿಯುತ್ತಿದ್ದ. ಕುಟುಂಬಸ್ಥರು ಮತ್ತು ಸ್ನೇಹಿತರು ಅಷ್ಟೊಂದು ಸ್ಟಿಂಗ್ ಜ್ಯೂಸ್ ಕುಡಿಯುವುದು ಒಳ್ಳೆಯದಲ್ಲ ಎಂದು ತಿಳಿ ಹೇಳಿದ್ದರೂ ಆತ ಕೇಳಿರಲಿಲ್ಲ. ಇತ್ತೀಚೆಗೆ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅತಿಯಾದ ಕೆಫೀನ್ ಹಾಗೂ ರಾಸಾಯನಿಕಗಳ ಸೇವನೆಯಿಂದ ಕಿಡ್ನಿ ವೈಫಲ್ಯ ಉಂಟಾಗಿ ಸಾವನ್ನಪ್ಪಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ಏನಿದು ಸ್ಟಿಂಗ್ ಜ್ಯೂಸ್
ಸ್ಟಿಂಗ್ (Sting) ಎನ್ನುವುದು ಪೆಪ್ಸಿಕೋ ಒಡೆತನದ ರಾಕ್‌ಸ್ಟಾರ್ ಇಂಕ್‌ನಿಂದ ತಯಾರಿಸಲ್ಪಡುವ ಜನಪ್ರಿಯ ಕಾರ್ಬೊನೇಟೆಡ್ ಎನರ್ಜಿ ಡ್ರಿಂಕ್ ಆಗಿದೆ. ಇದು ಕೆಫೀನ್, ಜಿನ್ಸೆಂಗ್ ಮತ್ತು ಬಿ-ವಿಟಮಿನ್‌ಗಳನ್ನು ಹೊಂದಿರುತ್ತದೆ, ಇದು ದೇಹಕ್ಕೆ ತ್ವರಿತ ಚೈತನ್ಯವನ್ನು ನೀಡುತ್ತದೆ.
ಇದರಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಮತ್ತು ಕೆಫೀನ್ ಇರುತ್ತದೆ. ಅತಿಯಾದ ಸೇವನೆಯು ನಿದ್ರಾಹೀನತೆ, ಆತಂಕ ಮತ್ತು ಹೃದಯ ಬಡಿತವನ್ನು ಹೆಚ್ಚಿಸುತ್ತದೆ.






