ರಾಜಕೀಯ

ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟ 

Views: 71

ಕನ್ನಡ ಕರಾವಳಿ ಸುದ್ದಿ: ರಾಜ್ಯಸಭೆಯ 4 ಮತ್ತು ವಿಧಾನ ಪರಿಷತ್ತಿನ 7 ಸ್ಥಾನಗಳಿಗೆ ಜೂನ್ 18 ರಂದು ನಡೆಯಲಿರುವ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ದೆಹಲಿ ವರಿಷ್ಠರು ತಡರಾತ್ರಿ ಸಾಕಷ್ಟು ಅಳೆದುತೂಗಿ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆಗೆ ಇಂದು ಸೋಮವಾರವೇ (ಜೂನ್ 8) ಕೊನೆಯ ದಿನವಾಗಿರುವುದರಿಂದ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ರಾಜ್ಯಸಭಾ ಕಣಕ್ಕೆ ಹಿರಿಯ ಆರ್‌ಎಸ್‌ಎಸ್‌ ಹಿನ್ನೆಲೆಯುಳ್ಳ ಪ್ರೊ. ಎಂ. ನಾಗರಾಜು ಅವರನ್ನು ಇಳಿಸಲು ಹೈಕಮಾಂಡ್ ನಿರ್ಧರಿಸಿದೆ. ಇನ್ನು ವಿಧಾನ ಪರಿಷತ್ ಚುನಾವಣೆಗೆ ರಘು ಕೌಟಿಲ್ಯ ಹಾಗೂ ಲಿಂಗರಾಜ ಪಾಟೀಲ ಅವರಿಗೆ ಟಿಕೆಟ್‌ ನೀಡಲಾಗಿದ್ದು, ಇಂದು ಬೆಳಗ್ಗೆಯೇ ಇವರೆಲ್ಲರೂ ವಿಧಾನಸೌಧದಲ್ಲಿ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್ ತನ್ನ ಶಾಸಕರ ಬಲದೊಂದಿಗೆ ವಿಧಾನ ಪರಿಷತ್ತಿನ 4 ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಿಸಿಕೊಳ್ಳಬಹುದು. ಅದೇ ರೀತಿ, ಬಿಜೆಪಿ ಕೂಡ ಇಬ್ಬರು ಅಭ್ಯರ್ಥಿಗಳನ್ನು ಸುಲಭವಾಗಿ ಗೆಲ್ಲಿಸಿಕೊಳ್ಳುವಷ್ಟು ಮತಗಳನ್ನು ಹೊಂದಿದೆ.

ಪರಿಷತ್ತಿನ 7ನೇ ಸ್ಥಾನಕ್ಕೆ ಕಾಂಗ್ರೆಸ್ ವಿನಯ್ ಕಾರ್ತಿಕ್ ಅವರನ್ನು ಕಣಕ್ಕಿಳಿಸಿದ್ದು, ಮೈತ್ರಿಕೂಟದ ಮತಗಳನ್ನು ಸೆಳೆಯಲು ಪ್ಲಾನ್ ಮಾಡಿದೆ. ಜೆಡಿಎಸ್, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮತ್ತು ಶಾಸಕ ಎಚ್.ಡಿ. ರೇವಣ್ಣ ಅವರ ನೇತೃತ್ವದಲ್ಲಿ ಭಾನುವಾರ ತುರ್ತು ಸಭೆ ನಡೆಸಿದೆ. ಮೈತ್ರಿ ಮತಗಳು ಚದುರದಂತೆ ಕಾಪಾಡಿಕೊಳ್ಳಲು ಹಾಲಿ ಪರಿಷತ್ 19 ಸದಸ್ಯ ಗೋವಿಂದರಾಜು ಅವರಿಗೆ ನಾಮಪತ್ರ ಸಲ್ಲಿಸಲು ಸೂಚಿಸಿದ್ದು, 7ನೇ ಸ್ಥಾನವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಜೆಡಿಎಸ್ ರಣತಂತ್ರ ಹೂಡಿದೆ.

ಬಿಜೆಪಿ ಪಾಳಯದ ಅಭ್ಯರ್ಥಿಗಳಾದ ಪ್ರೊ. ಎಂ. ನಾಗರಾಜ್ (ರಾಜ್ಯಸಭೆ): ಕರ್ನಾಟಕ ಭಾಗದ ಹಿರಿಯ ಆರ್‌ಎಸ್‌ಎಸ್ ಹಿನ್ನೆಲೆಯುಳ್ಳವರಾದ ಇವರ ಹೆಸರನ್ನು ಬಿಜೆಪಿ ರಾಜ್ಯ ಘಟಕವು ಹೈಕಮಾಂಡ್‌ಗೆ ಪ್ರಮುಖವಾಗಿ ಶಿಫಾರಸು ಮಾಡಿತ್ತು.

ಲಿಂಗರಾಜ ಪಾಟೀಲ (ವಿಧಾನ ಪರಿಷತ್): ಬಿಜೆಪಿಯ ಹಿರಿಯ ನಾಯಕರಾಗಿದ್ದು, ಪಕ್ಷದ ರಾಜ್ಯ ಶಿಸ್ತು ಸಮಿತಿಯ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದ ಅನುಭವ ಇವರಿಗಿದೆ.

ರಘು ಕೌಟಿಲ್ಯ (ವಿಧಾನ ಪರಿಷತ್): ಮೈಸೂರು-ಚಾಮರಾಜನಗರ ಭಾಗದ ಹಿಂದುಳಿದ ವರ್ಗಗಳ ಪ್ರಮುಖ ನಾಯಕರಾಗಿದ್ದು, ಈ ಹಿಂದೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಸ್ಪರ್ಧಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು.

ಕಾಂಗ್ರೆಸ್ ನಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ವಕ್ತಾರ ಪವನ್ ಖೇರಾ ಮತ್ತು ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿ ಖಾನ್ ರಾಜ್ಯ ಸಭೆಗೆ ಹೆಸರು ಪ್ರಕಟಿಸಿದೆ.

ವಿಧಾನ ಪರಿಷತ್ತಿಗೆ ಬಿ.ಕೆ. ಹರಿಪ್ರಸಾದ್, ತಿಪ್ಪಣ್ಣಪ್ಪ ಕಾಮಕನೂ‌ರ್, ಪಿ.ವಿ. ಮೋಹನ್, ಶಿವಣ್ಣ ಮಲ್ಲವಳ್ಳಿ ಹಾಗೂ ವಿನಯ್ ಕಾರ್ತಿಕ್.

Related Articles

Back to top button
error: Content is protected !!