ಪತ್ನಿ ಅಪ್ರಾಪ್ತ ಪುತ್ರನಿಂದ ಹಲ್ಲೆ ನಡೆಸಿ ಕೊಲೆ ಆರೋಪ: ಸಮಾಧಿಯಿಂದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ
Views: 80
ಕನ್ನಡ ಕರಾವಳಿ ಸುದ್ದಿ: ಹಾಸನ ನಗರದಲ್ಲಿ ಮೇ 18ರಂದು ಮೃತಪಟ್ಟಿದ್ದ ಹೋಟೆಲ್ ಉದ್ಯಮಿ ಗುರುಮೂರ್ತಿ (44) ಅವರ ಸಾವಿನ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಸಮಾಧಿಯಿಂದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಹಾಸನ ನಗರದ ತಣ್ಣೀರುಹಳ್ಳದಲ್ಲಿ ಕೇರಳಾಪುರ ಮಿಲ್ಟಿ ಹೋಟೆಲ್ ನಡೆಸುತ್ತಿದ್ದ ಗುರುಮೂರ್ತಿ ಅವರು ಸಾಲದ ಸಮಸ್ಯೆಯಿಂದ ಸಂಕಷ್ಟದಲ್ಲಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಪತ್ನಿ ವೀಣಾ (40) ಅವರೊಂದಿಗೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಮೇ 14ರಂದು ಮೈಸೂರಿನಲ್ಲಿರುವ ತಾಯಿ ರೇಣುಕಾ ಅವರ ಮನೆಗೆ ತೆರಳಿದ್ದ ಗುರುಮೂರ್ತಿ ಹೊಟ್ಟೆಗೆ ಬ್ಯಾಂಡೇಜ್ ಹಾಕಿಕೊಂಡಿದ್ದರು. ಈ ಕುರಿತು ತಾಯಿ ಕೇಳಿದಾಗ, ಪತ್ನಿ ಹಾಗೂ ಅಪ್ರಾಪ್ತ ಪುತ್ರ ಹಲ್ಲೆ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದರು ಎನ್ನಲಾಗಿದೆ. ನಂತರ ಮೇ 15ರಂದು ಹಾಸನಕ್ಕೆ ಮರಳಿದ್ದ ಅವರು, ಮೇ 18ರಂದು ತಮ್ಮ ಮನೆಯಲ್ಲಿ ಮೃತಪಟ್ಟಿದ್ದರು.
ಈ ನಡುವೆ ಮನೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಗುರುಮೂರ್ತಿ ಅವರ ಸಂಬಂಧಿಕರು, ಮೇ 17ರ ರಾತ್ರಿ ಪತ್ನಿ ಹಾಗೂ ಪುತ್ರ ಗುರುಮೂರ್ತಿ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ದಾಖಲಾಗಿವೆ ಎಂದು ಆರೋಪಿಸಿದ್ದಾರೆ. ಹಲ್ಲೆಯ ಬಳಿಕ ಗುರುಮೂರ್ತಿ ಮನೆಯಲ್ಲೇ ಕುಸಿದು ಬಿದ್ದಿದ್ದು, ನಂತರ ಅವರನ್ನು ಮಂಚದ ಮೇಲೆ ಮಲಗಿಸಿರುವ ದೃಶ್ಯಗಳೂ ಸೆರೆಯಾಗಿವೆ ಎನ್ನಲಾಗಿದೆ.
ಗುರುಮೂರ್ತಿ ಅವರ ತಾಯಿ ರೇಣುಕಾ ಅವರು ಮೇ 25ರಂದು ಹಾಸನ ನಗರ ಪೊಲೀಸ್ ಠಾಣೆಗೆ ದೂರು ನೀಡಿ, ಪತ್ನಿ ವೀಣಾ ಹಾಗೂ ಅಪ್ರಾಪ್ತ ಪುತ್ರ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ದೂರಿನ ಆಧಾರದ ಮೇಲೆ ಪೊಲೀಸರು ಇಂದು ಹಾಸನ ನಗರದ ಬಿಟ್ಟಗೋಡನಹಳ್ಳಿ ಮಸಣದಲ್ಲಿ ಸಮಾಧಿ ಮಾಡಲಾಗಿದ್ದ ಗುರುಮೂರ್ತಿ ಅವರ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಮೃತದೇಹವನ್ನು ಅದೇ ಸ್ಥಳದಲ್ಲಿ ಮರುಸಮಾಧಿ ಮಾಡಲಾಗಿದೆ.






