ರಾಜಕೀಯ

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ

Views: 77

ಕನ್ನಡ ಕರಾವಳಿ ಸುದ್ದಿ: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ.ಇಂದು ಮಧ್ಯಾಹ್ನ ಲೋಕಭವನಕ್ಕೆ ಆಗಮಿಸಿದ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭು ಶಂಕರ್ ಅವರಿಗೆ ಸಲ್ಲಿಸಿದರು. ಈ ಮೂಲಕ ಕಳೆದ ಮೂರು ವರ್ಷಗಳ ಅವರ ಆಡಳಿತ ಅಂತ್ಯಗೊಂಡಿತು.

ರಾಜ್ಯಪಾಲರು ಇಂದೋರ್ ಗೆ ತೆರಳಿರುವ ಕಾರಣ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಹಸ್ತಾಂತರಿಸಿದರು. ಸದ್ಯಕ್ಕೆ ರಾಜೀನಾಮೆ ಪತ್ರವನ್ನು ಕಾರ್ಯದರ್ಶಿಗಳು ಸ್ವೀಕರಿಸಿದ್ದರೂ, ಸಂವಿಧಾನದ ನಿಯಮಾವಳಿಗಳ ಪ್ರಕಾರ ರಾಜ್ಯಪಾಲರು ಖುದ್ದಾಗಿ ಸಹಿ ಮಾಡಿದ ಬಳಿಕವೇ ರಾಜೀನಾಮೆ ಅಧಿಕೃತವಾಗಿ ಅಂಗೀಕಾರವಾಗಲಿದೆ.

ಮೂಲಗಳ ಪ್ರಕಾರ ರಾಜ್ಯಪಾಲರು ಇಂದು ರಾತ್ರಿ 7:30ಕ್ಕೆ ಬೆಂಗಳೂರಿಗೆ ಮರಳುವ ಸಾಧ್ಯತೆಯಿದೆ. ಹೀಗಾಗಿ ರಾಜ್ಯಪಾಲರು ಮರಳಿದ ಬಳಿಕವಷ್ಟೇ ರಾಜೀನಾಮೆ ಅಂಗೀಕಾರದ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ.

ಈ ಮೂಲಕ ಐದು ದಶಕಗಳ ಸುದೀರ್ಘ ರಾಜಕೀಯ ಚರಿತ್ರೆಯ ದಣಿವರಿಯದ ಹೋರಾಟಗಾರ, ಸಮಾಜವಾದಿ ಸಿದ್ದರಾಮಯ್ಯ ಅವರ ಎರಡನೇ ಅವಧಿಯ ಮುಖ್ಯಮಂತ್ರಿ ಆಡಳಿತ ಅಂತ್ಯ ಕಂಡಿದೆ. ಹೈಕಮಾಂಡ್ ಸೂಚನೆ ಮತ್ತು ರಾಹುಲ್ ಗಾಂಧಿ ಅವರ ಸಂದೇಶಕ್ಕೆ ಗೌರವ ನೀಡಿ, ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಸಿದ್ದರಾಮಯ್ಯ ಅವರು ಎರಡು ಪ್ರತ್ಯೇಕ ಅವಧಿಗಳಲ್ಲಿ ಒಟ್ಟು 8 ವರ್ಷ ಮತ್ತು 12 ದಿನಗಳ ಕಾಲ (ಸುಮಾರು 2,939 ದಿನಗಳು) ರಾಜ್ಯವನ್ನು ಮುನ್ನಡೆಸಿದ್ದಾರೆ. ಮೊದಲ ಅವಧಿಯಲ್ಲಿ ಮೇ 13, 2013 ರಿಂದ ಮೇ 15, 2018 ರವರೆಗೆ ಯಶಸ್ವಿಯಾಗಿ 5 ವರ್ಷಗಳ ಪೂರ್ಣಾವಧಿ ಪೂರೈಸಿದರು (ಒಟ್ಟು 1829 ದಿನಗಳು). ಎರಡನೇ ಅವಧಿಯಲ್ಲಿ ಮೇ 20, 2023 ರಂದು ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಅವರು, ತಮ್ಮ ಆಡಳಿತವನ್ನು ಮುಂದುವರಿಸಿ ಹೊಸ ದಾಖಲೆ ಬರೆದಿದ್ದಾರೆ.

ಈ ಮೊದಲು ಕರ್ನಾಟಕದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ದಾಖಲೆ ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ಅವರ ಹೆಸರಿನಲ್ಲಿತ್ತು. ಆದರೆ, ಜನವರಿ 2026ರಲ್ಲಿ ಸಿದ್ದರಾಮಯ್ಯ ಅವರು ದೇವರಾಜ ಅರಸು ಅವರ ಈ ಸುದೀರ್ಘ ಅವಧಿಯ ದಾಖಲೆಯನ್ನು ಅಧಿಕೃತವಾಗಿ ಮೀರಿ ನಿಂತರು. ಆ ಮೂಲಕ ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ದಿನಗಳ ಕಾಲ ಗದ್ದುಗೆ ಅಲಂಕರಿಸಿದ ‘ನಂಬರ್ ಒನ್’ ನಾಯಕ ಎನಿಸಿಕೊಂಡರು.

Related Articles

Back to top button
error: Content is protected !!