ಇತರೆ

ರಸ್ತೆ ಬದಿ ನಿಲ್ಲಿಸಿದ್ದ ಕಾರಿನೊಳಗೆ ಆಟವಾಡುತ್ತಿದ್ದ ಮಕ್ಕಳು ಉಸಿರುಗಟ್ಟಿ ಸಾವು

Views: 89

ಕನ್ನಡ ಕರಾವಳಿ ಸುದ್ದಿ: ರಸ್ತೆ ಬದಿ ನಿಲ್ಲಿಸಿದ್ದ ಕಾರಿನೊಳಗೆ ಆಟವಾಡುತ್ತಾ ಸಹೋದರಿಯರು ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ರಾಜಸ್ಥಾನದ ಅಲ್ವಾರ್ ನಗರದಲ್ಲಿ ಖುದನ್‌ಪುರಿ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ. ಮೃತ ಬಾಲಕಿಯರನ್ನು ತೀನಾ (8) ಮತ್ತು ಲಕ್ಷ್ಮಿ (5) ಎಂದು ಗುರುತಿಸಲಾಗಿದೆ.

ಈ ಇಬ್ಬರು ಹೆಣ್ಣುಮಕ್ಕಳ ತಂದೆ ರಮೇಶ್ ಅವರು ಸಲೂನ್ ಅಂಗಡಿ ನಡೆಸುತ್ತಿದ್ದು ಬುಧವಾರ ಬೆಳಗ್ಗೆ ಎಂದಿನಂತೆ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳಿದ್ದರು.

ಮಧ್ಯಾಹ್ನ ಸುಮಾರು 11:30ರ ಹೊತ್ತಿಗೆ ಇಬ್ಬರು ಬಾಲಕಿಯರು ಆಟವಾಡುತ್ತಾ ಸಮೀಪದಲ್ಲಿದ್ದ ಕಾರ್‌ ರಿಪೇರಿ ಕೇಂದ್ರಕ್ಕೆ ಹೋಗಿದ್ದಾರೆ. ಅಲ್ಲಿ ನಿಲ್ಲಿಸಲಾಗಿದ್ದ ಹಳೆಯ ಕೆಂಪು ಬಣ್ಣದ ಕಾರಿನ ಬಾಗಿಲು ತೆರೆದು ಇಬ್ಬರೂ ಒಳಗೆ ಕುಳಿತುಕೊಂಡಿದ್ದಾರೆ. ಆ ಬಳಿಕ ಕಾರಿನ ಬಾಗಿಲು ಮುಚ್ಚಿಕೊಂಡಿದ್ದು ಒಳಗಿನಿಂದ ಅದನ್ನು ತೆರೆಯಲು ಸಾಧ್ಯವಾಗದೆ ಇಬ್ಬರೂ ಕಾರಿನೊಳಗೆ ಸಿಲುಕಿಕೊಂಡಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ತಂದೆ ರಮೇಶ್ ಅವರು ಊಟಕ್ಕಾಗಿ ಮನೆಗೆ ಬಂದಾಗ ಹೆಣ್ಣುಮಕ್ಕಳು ಕಾಣಿಸಲಿಲ್ಲ. ಇದರಿಂದ ಆತಂಕಗೊಂಡ ಅವರು ಆಸುಪಾಸಿನಲ್ಲಿ ಹುಡುಕಾಡಲು ಆರಂಭಿಸಿದರು. ಈ ವೇಳೆ ರಿಪೇರಿ ಕೇಂದ್ರದಲ್ಲಿದ್ದ ಕಾರಿನೊಳಗೆ ಇಬ್ಬರು ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಸ್ಥಳೀಯರ ನೆರವಿನಿಂದ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

ಈ ದುರದೃಷ್ಟಕರ ಘಟನೆಯ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮಕ್ಕಳು ಆಟವಾಡುತ್ತಾ ಬಂದು ಕಾರಿನೊಳಗೆ ಹೋಗಿ ಬಾಗಿಲು ಹಾಕಿಕೊಳ್ಳುವ ದೃಶ್ಯಗಳು ಇದರಲ್ಲಿ ಸ್ಪಷ್ಟವಾಗಿ ಕಾಣಿಸುತ್ತವೆ. ಕಾರಿನ ಇಂಜಿನ್ ಮತ್ತು ಬ್ಯಾಟರಿ ಸಂಪೂರ್ಣವಾಗಿ ಕೆಟ್ಟುಹೋಗಿದ್ದರಿಂದ ಕಾರು ಲಾಕ್ ಆಗುವ ಸಾಧ್ಯತೆ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಕ್ಕಳು ತಾವಾಗಿಯೇ ಬಾಗಿಲು ಹಾಕಿಕೊಂಡ ಬಳಿಕ, ಅದನ್ನು ಮತ್ತೆ ತೆರೆಯಲು ತಿಳಿಯದೆ ಒಳಗೆ ಸಿಲುಕಿ ಉಸಿರುಗಟ್ಟಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Related Articles

Back to top button
error: Content is protected !!