ಅಸ್ಸಾಂ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಹಿಮಂತ ಬಿಸ್ವಾ ಶರ್ಮಾ ಪ್ರಮಾಣ ವಚನ
Views: 21
ಕನ್ನಡ ಕರಾವಳಿ ಸುದ್ದಿ: ಅಸ್ಸಾಂನ ಮುಖ್ಯಮಂತ್ರಿಯಾಗಿ ಹಿಮಂತ ಬಿಸ್ವಾ ಶರ್ಮ ಶರ್ಮಾ ಸತತ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಗುವಾಹಟಿಯ ಖಾನಾಪಾರಾದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ರಾಜ್ಯಪಾಲ ಲಕ್ಷ್ಮಣ ಪ್ರಸಾದ್ ಆಚಾರ್ಯ ಶರ್ಮಾ ಅವರಿಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಮುಖ್ಯಮಂತ್ರಿಯವರ ಜೊತೆಗೆ ಬಿಜೆಪಿಯ ರಾಮೇಶ್ವರ್ ತೇಲಿ ಮತ್ತು ಅಜಂತಾ ನಿಯೋಗ್, ಎಜಿಪಿಯ ಅತುಲ್ ಬೋರಾ ಮತ್ತು ಬಿಪಿಎಫ್‌ನ ಚರಣ್ ಬೋರೋ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಜಂತಾ ನಿಯೋಗ್ ಹಿಂದಿನ ಸರ್ಕಾರದಲ್ಲಿ ಹಣಕಾಸು ಸಚಿವೆಯಾಗಿದ್ದರು, ಅತುಲ್ ಬೋರಾ ಕೃಷಿ ಇಲಾಖೆ ಮತ್ತು ಚರಣ್ ಬೋರೋ ಸಾರಿಗೆ ಇಲಾಖೆಯನ್ನು ನಿರ್ವಹಿಸಿದ್ದರು. ಕೇಂದ್ರದ ಮಾಜಿ ಸಚಿವ ರಾಮೇಶ್ವರ್ ತೇಲಿ ಈ ಬಾರಿ ರಾಜ್ಯ ರಾಜಕಾರಣಕ್ಕೆ ಮರಳಿದ್ದಾರೆ.
ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಸರ್ಬಾನಂದ ಸೋನೋವಾಲ್ ಮತ್ತು ಇತರ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟದ ಸತತ ಮೂರನೇ ಸರ್ಕಾರದ ರಚನೆಯನ್ನು ಗುರುತಿಸಿದೆ.
ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾತನಾಡಿದ 57 ವರ್ಷದ ಹಿಮಂತ ಬಿಸ್ವಾ ಶರ್ಮಾ, ನನ್ನ ಮೊದಲ ಅವಧಿ ಕೇವಲ ಟ್ರೈಲರ್ ಅಷ್ಟೇ, ಎರಡನೇ ಅವಧಿಯಲ್ಲಿ ಅಸಲಿ ಸಿನಿಮಾ ತೆರೆದುಕೊಳ್ಳಲಿದೆ. ರಾಜ್ಯದ ಅಭಿವೃದ್ಧಿ ಪ್ರಯಾಣವನ್ನು ನಾವು ಮತ್ತಷ್ಟು ವೇಗವಾಗಿ ಮುಂದುವರಿಸುತ್ತೇವೆ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ತೀವ್ರ ಟೀಕೆ ಮತ್ತು ಆರೋಪಗಳ ನಡುವೆಯೂ ಶರ್ಮಾ ಬಿಜೆಪಿಯನ್ನು ಅಸ್ಸಾಂನಲ್ಲಿ ಅತ್ಯಂತ ಬಲಿಷ್ಠ ಪಕ್ಷವನ್ನಾಗಿ ರೂಪಿಸಿದ್ದಾರೆ. 126 ಸದಸ್ಯರ ವಿಧಾನಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟವು ದಾಖಲೆಯ 102 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದರಲ್ಲಿ ಬಿಜೆಪಿ 82, ಎಜಿಪಿ 10 ಮತ್ತು ಬಿಪಿಎಫ್ 10 ಸ್ಥಾನಗಳನ್ನು ಗೆದ್ದಿವೆ.






