ಪ್ರೀತಿ ಹೆಸರಿನಲ್ಲಿ ಆಕ್ರೋಶ: ಪ್ರಿಯಕರನ ಪತ್ತೆಗಾಗಿ ಆತನ ಅಣ್ಣನನ್ನು ಅಪಹರಿಸಿ, ಹಲ್ಲೆ
Views: 30
ಕನ್ನಡ ಕರಾವಳಿ ಸುದ್ದಿ: ಪ್ರೀತಿ ಹೆಸರಿನಲ್ಲಿ ಮಗಳು ಮನೆ ಬಿಟ್ಟು ಹೋದ ಆಕ್ರೋಶಕ್ಕೆ ತಂದೆಯೊಬ್ಬ ಮಗಳ ಪ್ರಿಯಕರನ ಪತ್ತೆಗಾಗಿ ಆತನ ಅಣ್ಣನನ್ನು ಅಪಹರಿಸಿ, ಹಲ್ಲೆ ನಡೆಸಿ ಆ ವಿಡಿಯೋವನ್ನು ಹರಿಬಿಟ್ಟಿರುವ ಪೈಶಾಚಿಕ ಕೃತ್ಯ ನಗರದ ಬ್ಯಾಡರಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ತಮ್ಮ ಮಾಡಿದ ಪ್ರೀತಿಯ ತಪ್ಪಿಗೆ ಅಣ್ಣನೊಬ್ಬ ಕಿಡ್ನಾಪ್ ಆಗಿ, ಕೈ-ಕಾಲು ಕಟ್ಟಿ ಅಮಾನವೀಯವಾಗಿ ಪೆಟ್ಟು ತಿಂದಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಪ್ರೇಮಿಗಳು ಮನೆ ಬಿಟ್ಟು ಹೋದ ಸೇಡನ್ನು ತೀರಿಸಿಕೊಳ್ಳಲು ಹುಡುಗಿಯ ಕಡೆಯವರು ಹುಡುಗನ ಅಣ್ಣನ ಮೇಲೆ ದೌರ್ಜನ್ಯ ಎಸಗಿದ್ದಾರೆ.
ಅಪಹರಣಕಾರರು ಅಷ್ಟಕ್ಕೇ ಸುಮ್ಮನಾಗದೆ ಕೊಟ್ರೇಶ್ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಶಿವು ಎಲ್ಲೇ ಇದ್ದರೂ ಹುಡುಗಿಯನ್ನು ತಂದು ನಮಗೆ ಒಪ್ಪಿಸು ಎಂದು ಕೊಟ್ರೇಶ್ ಕೈಯಲ್ಲಿ ಹೇಳಿಸಿ ವಿಡಿಯೋ ಮಾಡಿದ್ದಾರೆ. ಪ್ರಾಣಭಯದಲ್ಲಿದ್ದ ಕೊಟ್ರೇಶ್ ತನ್ನ ತಮ್ಮನ ಬಳಿ ಅಂಗಲಾಚಿ ಬೇಡಿಕೊಳ್ಳುವ ದೃಶ್ಯ ಆ ವಿಡಿಯೋದಲ್ಲಿದೆ. ಈ ವಿಡಿಯೋವನ್ನು ಆರೋಪಿಗಳು ಕೊಟ್ರೇಶ್ ಸಂಬಂಧಿಕರಿಗೆ ಕಳಿಸಿ ಬೆದರಿಕೆ ಹಾಕಿದ್ದರು.
ವಿಡಿಯೋ ನೋಡಿ ಬೆಚ್ಚಿಬಿದ್ದ ಕೊಟ್ರೇಶ್ ಸಂಬಂಧಿಕರು ತಕ್ಷಣ ಬ್ಯಾಡರಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕೊಟ್ರೇಶ್ ಅವರನ್ನು ಆರೋಪಿಗಳ ವಶದಿಂದ ರಕ್ಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಸದ್ಯ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುತ್ತಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.






