ವಿಭಿನ್ನ ಪ್ರೇಮಕಥೆ!..ಪೂರ್ವ ಕೈದಿಯೊಂದಿಗೆ ಸಪ್ತಪದಿ ತುಳಿದ ಜೈಲಾಧಿಕಾರಿ
Views: 176
ಕನ್ನಡ ಕರಾವಳಿ ಸುದ್ದಿ: ಮಧ್ಯಪ್ರದೇಶದ ಸತ್ನಾ ಕೇಂದ್ರ ಕಾರಾಗೃಹದ ಸಹಾಯಕ ಜೈಲು ಅಧೀಕ್ಷಕರಾಗಿರುವ ಫಿರೋಜಾ ಖಾತೂನ್ ಮತ್ತು ಕೊಲೆ ಪ್ರಕರಣದಲ್ಲಿ 14 ವರ್ಷ ಜೈಲು ಶಿಕ್ಷೆ ಪೂರ್ಣಗೊಳಿಸಿದ ಧರ್ಮೇಂದ್ರ ಇದೀಗ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ. ಮೇ 5 ರಂದು ಛತರ್ಪುರ್ನ ಲವಕುಶ ನಗರದಲ್ಲಿ ಈ ಮದುವೆ ನೆರವೇರಿದೆ.
ಭೀಕರ ಕೊಲೆ ಪ್ರಕರಣದಲ್ಲಿ ಧರ್ಮೇಂದ್ರ ಅಲಿಯಾಸ್ ಅಭಿಲಾಷ್ 14 ವರ್ಷಗಳ ಜೀವವಾಧಿ ಶಿಕ್ಷೆ ಅನುಭವಿಸಿ, 2020ರಲ್ಲಿ ಜೈಲಿನಿಂದ ಬಿಡುಗಡೆಗೊಂಡಿದ್ದರು. ಧರ್ಮೇಂದ್ರ ಜೈಲಿನಲ್ಲಿರುವಾಗ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಅಧಿಕಾರಿ ಫಿರೋಜಾ ಖಾತೂನ್ ಕೂಡ ಈತನ ಶಿಕ್ಷೆ ಅವಧಿ ಮುಗಿದ ಬಳಿಕ ಮದುವೆ ಮಾಡಿಕೊಳ್ಳಲು ಕಾದಿದ್ದರು.
ಜೈಲಿನಿಂದ ಬಿಡುಗಡೆಗೊಂಡ ಐದು ವರ್ಷಗಳ ಬಳಿಕ ಇದೀಗ ಧರ್ಮೇಂದ್ರ ಜೊತೆ ವಿವಾಹ ಬಂಧನಕ್ಕೊಳಗಾಗಿದ್ದಾರೆ. ಫಿರೋಜ್ ಖಾತೂನ್ ಪ್ರಸ್ತುತ ಸತ್ನಾ ಕೇಂದ್ರೀಯ ಕಾರಾಗೃಹದಲ್ಲಿ ರೌಂಡ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಧರ್ಮೇಂದ್ರ, ಚಾಂದ್ಲಾ ಮುನ್ಸಿಪಲ್ ಕೌನ್ಸಿಲ್ ಉಪಾಧ್ಯಕ್ಷರ ಭೀಕರ ಕೊಲೆ ಪ್ರಕರಣದಲ್ಲಿ ಸತ್ನಾ ಸೆಂಟ್ರಲ್ ಜೈಲಿನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ 2020ರಲ್ಲಿ ಜೈಲು ಶಿಕ್ಷೆ ಪೂರ್ಣಗೊಳಿಸಿ ಬಿಡುಗಡೆಗೊಂಡಿದ್ದರು. ಇವರ ಪ್ರೇಮ-ಪ್ರೀತಿಯ ವಿಷಯ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಅಧಿಕಾರಿಯೊಬ್ಬರು ಕೈದಿ ಜೊತೆಗೆ ಪ್ರೇಮ ಹೊಂದಿದ್ದರು ಎಂಬ ಕಲ್ಪನೆಯು ಯಾರಿಗೂ ಇಲ್ಲವಾಗಿತ್ತು.
ಈ ವಿವಾಹಕ್ಕೆ ಅಧಿಕಾರಿಯ ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಮಗಳನ್ನು ತಮ್ಮ ಸಮುದಾಯದ ವರನ ಜೊತೆ ಮದುವೆ ಮಾಡಲು ಉದ್ದೇಶಿಸಿದ್ದ ಕುಟುಂಬ, ಮದುವೆಗೆ ಗೈರುಹಾಜರಾಗಿತ್ತು.
ಈ ಮದುವೆ ಕುರಿತು ಮಾತನಾಡಿರುವ ಅಧಿಕಾರಿ ಫಿರೋಜ್ ಖಾತೂನ್, ಇದು ತಮ್ಮ ವೈಯಕ್ತಿಕ ಅಭಿಪ್ರಾಯವಾಗಿದೆ. ಈ ಮದುವೆಯಿಂದ ಖುಷಿಯಾಗಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಯು ತಮ್ಮ ವೈಯಕ್ತಿಕ ಜೀವನದ ಕುರಿತು ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ ಎಂದು ಹೇಳಿದ್ದಾರೆ.






