26 ವರ್ಷದ ಯುವತಿ ಜತೆ ಪ್ರೀತಿಗೆ ಅಡ್ಡಿ: ಮನನೊಂದು ಬಾಲಕ ಆತ್ಮಹತ್ಯೆ
Views: 127
ಕನ್ನಡ ಕರಾವಳಿ ಸುದ್ದಿ: 26 ವರ್ಷದ ಯುವತಿ ಜತೆ ಪ್ರೀತಿಗೆ ಮನೆಯವರು ಅಡ್ಡಿಪಡಿಸಿದ ಹಿನ್ನೆಲೆ ವಿಷ ಸೇವಿಸಿ 15 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನಪಟ್ಟಣದ ರಾಜಾಕೆಂಪೇಗೌಡ ಬಡಾವಣೆಯಲ್ಲಿ ನಡೆದಿದೆ.
ಬಿಡದಿ ಮೂಲದ 26 ವರ್ಷದ ಯುವತಿ ಜತೆ ಬಾಲಕ ಪ್ರೀತಿಯಲ್ಲಿ ಬಿದ್ದಿದ್ದ. ಈ ಬಗ್ಗೆ ಪೋಷಕರಿಗೆ ವಿಚಾರ ಗೊತ್ತಾಗಿದ್ದು, ಬಾಲಕನಿಗೆ ಬೈದು ಬುದ್ಧಿ ಹೇಳಿದ್ದರು. ನಿಮ್ಮಿಬ್ಬರಿಗೂ ವಯಸ್ಸಿನ ಅಂತರ ಇದೆ, ಇದನ್ನು ಇಲ್ಲಿಗೆ ನಿಲ್ಲಿಸುವಂತೆ ತಾಕೀತು ಮಾಡಿದ್ದರು. ಆದರೂ ಬಾಲಕ ಹಾಗೂ ಯುವತಿ ವಾಟ್ಸಾಪ್, ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಇದಾದ ಬಳಿಕ ಮನೆ ಬಿಟ್ಟು ಬಂದಿದ್ದ ಬಾಲಕ ಚನ್ನಪಟ್ಟಣದ ತನ್ನ ಸ್ನೇಹಿತನ ಮನೆಯಲ್ಲಿದ್ದ.
ಯುವತಿ ಜತೆ ಇದೇ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಏ.29ರಂದು ವಿಷ ಸೇವಿಸಿ ಬಾಲಕ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಸ್ನೇಹಿತರು ಚನ್ನಪಟ್ಟಣ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ 4ರಂದು ಬಾಲಕ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆ ಮಗನ ಸಾವಿಗೆ ಯುವತಿಯೇ ಕಾರಣ ಎಂದು ಬಾಲಕನ ಪೋಷಕರು ದೂರು ನೀಡಿದ್ದು, ಈ ಸಂಬಂಧ ಯುವತಿ ವಿರುದ್ಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.






