ಇತರೆ

ವಿಡಿಯೋ ಕಾಲ್ ನಲ್ಲಿ ಮಗು ತೋರಿಸಿಲ್ಲ ಎಂದು ಅತ್ತೆಗೆ ಚಾಕುವಿನಿಂದ ಇರಿದ ಅಳಿಯ

Views: 58

ಕನ್ನಡ ಕರಾವಳಿ ಸುದ್ದಿ: ಮಗುವನ್ನು ನೋಡಬೇಕೆಂಬ ಹಂಬಲ ಮತ್ತು ವಿಡಿಯೋ ಕಾಲ್ ವಿಚಾರದಲ್ಲಿ ನಡೆದ ಸಣ್ಣ ಜಗಳವೊಂದು ಅತ್ತೆಯ ಕೊಲೆ ಪ್ರಯತ್ನದಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ.

ಆಲದಕಟ್ಟಿ ಗ್ರಾಮದ ನಿವಾಸಿ ಅರವಿಂದ ಗವಳಿ (26) ಎಂಬಾತನೇ ತನ್ನ ಅತ್ತೆ ಮಹಾದೇವಿ ಕರಿಗಾರ ಅವರ ಹೊಟ್ಟೆಗೆ ಚಾಕು ಇರಿದ ಆರೋಪಿ. ಅರವಿಂದ ಮತ್ತು ಆತನ ಪತ್ನಿ ಕಳೆದ ವರ್ಷವಷ್ಟೇ ಸಪ್ತಪದಿ ತುಳಿದಿದ್ದರು. ಇತ್ತೀಚೆಗೆ ಈ ದಂಪತಿಗೆ ಮುದ್ದಾದ ಗಂಡು ಮಗು ಜನಿಸಿತ್ತು. ಮಗು ಹುಟ್ಟಿದ ದಿನದಿಂದಲೂ ಅರವಿಂದನಿಗೆ ತನ್ನ ಮಗನನ್ನು ನೋಡಬೇಕೆಂಬ ತವಕ ಹೆಚ್ಚಾಗಿತ್ತು ಎನ್ನಲಾಗಿದೆ.

ಅರವಿಂದನ ಪತ್ನಿ ಮಗುವಿನೊಂದಿಗೆ ತವರು ಮನೆಯಲ್ಲಿದ್ದರು. ಮಗುವನ್ನು ನೋಡಲು ಅರವಿಂದ ಪದೇ ಪದೇ ಪತ್ನಿಗೆ ವಿಡಿಯೋ ಕಾಲ್ ಮಾಡುತ್ತಿದ್ದ. ಒಂದು ದಿನ ವಿಡಿಯೋ ಕಾಲ್ ಮಾಡಿದಾಗ ಪತ್ನಿ, ಮೊಬೈಲ್ ಹಿಡಿದು ಹಿಡಿದು ಕೈ ನೋಯುತ್ತಿದೆ, ಈಗ ಮಗು ತೋರಿಸಲು ಆಗಲ್ಲ ಎಂದು ಹೇಳಿದ್ದಾಳೆ. ಈ ಸಣ್ಣ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ.

ಈ ವೇಳೆ ಅತ್ತೆ ಮಹಾದೇವಿ ಕರಿಗಾರ ಅವರು ಮಗಳ ಪರ ವಹಿಸಿ ಅಳಿಯನಿಗೆ ಬುದ್ಧಿ ಹೇಳಲು ಹೋಗಿದ್ದಾರೆ. ಫೋನ್‌ನಲ್ಲಿ ನಡೆದ ಈ ಜಗಳದಿಂದ ರೊಚ್ಚಿಗೆದ್ದ ಅಳಿಯ ಅರವಿಂದ, ನೇರವಾಗಿ ಅತ್ತೆಯ ಮನೆಗೆ ನುಗ್ಗಿ ತನ್ನ ಬಳಿಯಿದ್ದ ಚಾಕುವಿನಿಂದ ಅತ್ತೆಯ ಹೊಟ್ಟೆಗೆ ಇರಿದಿದ್ದಾನೆ.

ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಾದೇವಿ ಅವರನ್ನು ತಕ್ಷಣವೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Related Articles

Back to top button
error: Content is protected !!