ಶಿಕ್ಷಣ

ಶಂಕರನಾರಾಯಣ ಮದರ್ ತೆರೆಸಾ ಪಿಯು ಕಾಲೇಜಿನಲ್ಲಿ  RC ವಿಮಾನ ಕಾರ್ಯಾಗಾರ

ವಿದ್ಯಾರ್ಥಿಗಳಲ್ಲಿ ಕಿರಿಯ ವಯಸ್ಸಿನಲ್ಲೇ ಇಂಜಿನಿಯರಿಂಗ್ ವಿಜ್ಞಾನಾಸಕ್ತಿ ಮೂಡಿಸಿದ ವಿನೂತನ ಪ್ರಯತ್ನ ನಿಜಕ್ಕೂ ಶ್ಲಾಘನೀಯ--- ಮದರ್ ತೆರೆಸಾ ಪಿಯು ಕಾಲೇಜಿನಲ್ಲಿ ನಡೆದ RC ವಿಮಾನ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿ ಶ್ರೀ ಮಧುಸೂದನ್ ಬಿ. ಎಂಐಟಿ ಮಣಿಪಾಲ

Views: 115

ಕನ್ನಡ ಕರಾವಳಿ ಸುದ್ದಿ

ಶಂಕರನಾರಾಯಣದ ಮದರ್ ತೆರೆಸಾ ಪಿಯು ಕಾಲೇಜಿನಲ್ಲಿ ಏಪ್ರಿಲ್ 17 ಮತ್ತು 18ರಂದು ಎರಡು ದಿನಗಳ RC (ರಿಮೋಟ್ ಕಂಟ್ರೋಲ್) ವಿಮಾನ ನಿರ್ಮಾಣ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.

15ರಿಂದ 18 ವರ್ಷ ವಯೋಮಾನದ ವಿದ್ಯಾರ್ಥಿಗಳಿಗೆ ಏರೋನಾಟಿಕಲ್ ಎಂಜಿನಿಯರಿಂಗ್‌ನ ಮೂಲಭೂತ ತತ್ವಗಳು ಹಾಗೂ ವಿಮಾನ ನಿರ್ಮಾಣದ ಪರಿಚಯ ನೀಡುವುದು ಇದರ ಮುಖ್ಯ ಉದ್ದೇಶವಾಗಿತ್ತು.

ಮದರ್ ತೆರೆಸಾ ಪಿಯು ಕಾಲೇಜು ಮತ್ತು ಬುಕ್ ಟೆಕ್ ಸೊಲ್ಯೂಷನ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಎಂಐಟಿ, ಮಾಹೆ ಮಣಿಪಾಲದ ವಿಮಾನ ವಸ್ತುಶಾಸ್ತ್ರ ತಜ್ಞರಾದ ಮಧುಸೂಧನ್ ಬಿ ಅವರು ತಮ್ಮ ಮಾತುಗಳಲ್ಲಿ, ಇಂತಹ ತಾಂತ್ರಿಕ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಿರಿಯ ವಯಸ್ಸಿನಲ್ಲಿ ಪರಿಚಯಿಸುವುದು ಬಹಳ ಉಪಯುಕ್ತವಾಗಿದ್ದು, ಇದರಿಂದ ಅವರಲ್ಲಿ ಹೊಸ ಆಸಕ್ತಿ ಮೂಡಿ ಭವಿಷ್ಯದ ದಾರಿಯನ್ನು ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಹೇಳಿದರು.

ಕಾರ್ಯಾಗಾರವನ್ನು ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯದ ಯುವ ಏರೋಸ್ಪೇಸ್ ಎಂಜಿನಿಯರ್‌ಗಳಾದ ಕಾರ್ತಿಕ್ ಆರ್. ಪಿ., ಯಶ್ ಆರ್ಯನ್ ಮತ್ತು ನವನೀತ್ ಅರಸು ನಡೆಸಿಕೊಟ್ಟರು. ಮೊದಲ ದಿನ ವಿದ್ಯಾರ್ಥಿಗಳಿಗೆ ವಿಮಾನಗಳ ವಿನ್ಯಾಸ, ಕಾರ್ಯವಿಧಾನ ಮತ್ತು ಹಾರಾಟದ ವೈಜ್ಞಾನಿಕ ತತ್ವಗಳ ಕುರಿತು ಮಾಹಿತಿ ನೀಡಲಾಯಿತು. ನಂತರ ವಿದ್ಯಾರ್ಥಿಗಳನ್ನು ತಂಡಗಳಾಗಿ ವಿಭಜಿಸಿ, ತಮ್ಮದೇ RC ವಿಮಾನವನ್ನು ವಿನ್ಯಾಸಗೊಳಿಸಿ ನಿರ್ಮಿಸುವ ಪ್ರಾಯೋಗಿಕ ತರಬೇತಿ ನೀಡಲಾಯಿತು.

ಸುಮಾರು 35ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು, ಮದರ್ ತೆರೆಸಾ ಸಂಸ್ಥೆಯ ವಿದ್ಯಾರ್ಥಿಗಳಷ್ಟೇ ಅಲ್ಲದೆ, ಪಡುಬಿದ್ರಿ, ಬ್ರಹ್ಮಾವರ ಸೇರಿದಂತೆ ದೂರದ ಪ್ರದೇಶಗಳಿಂದಲೂ ವಿದ್ಯಾರ್ಥಿಗಳು ಆಗಮಿಸಿದ್ದರೆಂಬುದು ವಿಶೇಷವಾಗಿದೆ.

ಎರಡನೇ ದಿನ, ವಿದ್ಯಾರ್ಥಿಗಳು ತಾವು ನಿರ್ಮಿಸಿದ ವಿಮಾನಗಳನ್ನು ಹಾರಿಸಿ ಪ್ರಾಯೋಗಿಕ ಅನುಭವ ಪಡೆದು ತಮ್ಮ ಪರಿಶ್ರಮದ ಫಲವನ್ನು ನೇರವಾಗಿ ಅನುಭವಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇಂತಹ ನವೀನ ಹಾಗೂ ಅನುಭವಾತ್ಮಕ ಶಿಕ್ಷಣಾವಕಾಶಗಳನ್ನು ನಿರಂತರವಾಗಿ ಒದಗಿಸುತ್ತಾ ಬರುತ್ತಿರುವ ಮದರ್ ತೆರೆಸಾ ಶಿಕ್ಷಣ ಸಂಸ್ಥೆ, ತನ್ನ ಶೈಕ್ಷಣಿಕ ಗುಣಮಟ್ಟ ಮತ್ತು ವಿದ್ಯಾರ್ಥಿ ಕೇಂದ್ರಿತ ದೃಷ್ಟಿಕೋನದ ಮೂಲಕ ಹಮ್ಮಿಕೊಂಡಿದ್ದ ಈ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರಗಳ ಬಗ್ಗೆ ಉತ್ತಮ ಅರಿವು ನೀಡುವುದರ ಜೊತೆಗೆ, ಭವಿಷ್ಯದ ವೃತ್ತಿ ಆಯ್ಕೆಗಳಿಗೆ ಪ್ರೇರೇಪಿಸಿಲು ಸಹಕಾರಿಯಾಗಿ ಹೊರಹೊಮ್ಮಿತು.

Related Articles

Back to top button
error: Content is protected !!