ಕುಂದಾಪುರ: ಮತಾಂತರಕ್ಕೆ ಒಪ್ಪದ ಪತ್ನಿ ಮೇಲೆ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕನ ಮಾರಣಾಂತಿಕ ಹಲ್ಲೆ
Views: 252
ಕನ್ನಡ ಕರಾವಳಿ ಸುದ್ದಿ: ಬೌದ್ಧ ಧರ್ಮಕ್ಕೆ ಮತಾಂತರವಾಗುವಂತೆ ಕಾಲೇಜಿನ ಉಪನ್ಯಾಸಕನೊಬ್ಬ ಒತ್ತಾಯಿಸಿ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ, ಶಾಲಿನಿಂದ ಕುತ್ತಿಗೆ ಬಿಗಿದು ಕೊಲೆಗೆ ಯತ್ನಿಸಿದ ಘಟನೆ ಅಂಪಾರು ಗ್ರಾಮದ ಬಲಾಡಿಯಲ್ಲಿ ನಡೆದಿದೆ.
ಬಂಟ್ವಾಳದ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಜಯರಾಮ ಶೆಟ್ಟಿ ಎಂಬುವವರ ವಿರುದ್ಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಪಾರು ಗ್ರಾಮದ ಜಡ್ಡಿನಬೈಲು ನಿವಾಸಿ ನಿಶಿತಾ ಶೆಟ್ಟಿ (26) ಅವರು ಕೆಂಚನೂರು ಗ್ರಾಮದ ಜಯರಾಮ ಶೆಟ್ಟಿ ಅವರನ್ನು 2021ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮದುವೆಯ ನಂತರ ಉಪ್ಪೂರಿನಲ್ಲಿ ವಾಸವಾಗಿದ್ದಾಗ, ಆರೋಪಿ ಜಯರಾಮ ಶೆಟ್ಟಿಯು ಪತ್ನಿ ಮತ್ತು ಮಕ್ಕಳು ಬೌದ್ಧ ಧರ್ಮಕ್ಕೆ ಮತಾಂತರವಾಗುವುದು ಅನಿವಾರ್ಯ ಎಂದು ಪೀಡಿಸುತ್ತಿದ್ದನೆನ್ನಲಾಗಿದೆ. ಇದಕ್ಕೆ ನಿಶಿತಾ ಅವರು ವಿರೋಧ ವ್ಯಕ್ತಪಡಿಸಿದಾಗ ಆಕೆಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರು ತಿಂಗಳ ಹಿಂದೆ ಎರಡನೇ ಮಗುವಿಗೆ ಜನ್ಮ ನೀಡಿದ್ದ ನಿಶಿತಾ ಅವರು ಬಲಾಡಿಯಲ್ಲಿರುವ ತಾಯಿಯ ಮನೆಯಲ್ಲಿ ವಾಸವಿದ್ದರು. ಏಪ್ರಿಲ್ 13 ರಂದು ಅಲ್ಲಿಗೆ ಬಂದಿದ್ದ ಆರೋಪಿ ಜಯರಾಮ ಶೆಟ್ಟಿ, ಏಪ್ರಿಲ್ 18 ರಂದು ಬೆಳಿಗ್ಗೆ ನಿಶಿತಾ ಅವರ ಚಿಕ್ಕಮ್ಮನ ಮಗ ಶಮಿತ್ ಶೆಟ್ಟಿ ಮನೆಗೆ ಬಂದ ವಿಚಾರಕ್ಕೆ ತಕರಾರು ತೆಗೆದಿದ್ದಾನೆ.
ಗಲಾಟೆ ವಿಕೋಪಕ್ಕೆ ತಿರುಗಿದಾಗ ಆರೋಪಿಯು ನಿಶಿತಾ ಅವರಿಗೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದು, ಕೊಲ್ಲುವ ಉದ್ದೇಶದಿಂದ ಆಕೆ ಧರಿಸಿದ್ದ ಚೂಡಿದಾರದ ಶಾಲಿನಿಂದ ಕುತ್ತಿಗೆ ಬಿಗಿದು ಬಿಗಿದಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ನಿಶಿತಾ ಅವರ ತಂದೆ ಸದಾಶಿವ ಶೆಟ್ಟಿ, ಅಣ್ಣ ಸುಜಿತ್ ಮತ್ತು ಶಮಿತ್ ಹಲ್ಲೆಯನ್ನು ತಡೆದು ನಿಶಿತಾ ಅವರನ್ನು ರಕ್ಷಿಸಿದ್ದಾರೆ.
ಆರೋಪಿಯು ಸದಾಶಿವ ಶೆಟ್ಟಿ ಅವರ ಮೇಲೂ ಹಲ್ಲೆ ನಡೆಸಿ, ಎಲ್ಲರಿಗೂ ಜೀವ ಬೆದರಿಕೆ ಹಾಕಿರುವುದಾಗಿ ವರದಿಯಾಗಿದೆ.
ಸಂತ್ರಸ್ತೆ ನಿಶಿತಾ ಶೆಟ್ಟಿ ನೀಡಿದ ದೂರಿನ ಮೇರೆಗೆ ಶಂಕರನಾರಾಯಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.






