ಶಿಕ್ಷಣ

ಸುಜ್ಞಾನ ಪಿಯು ಕಾಲೇಜು: ಪ್ರಥಮ ಬ್ಯಾಚ್‌ನಲ್ಲೇ ಶೇ.100 ಫಲಿತಾಂಶ..ರಾಜ್ಯಕ್ಕೆ 9ನೇ ರ‍್ಯಾಂಕ್ ಸಾಧಕಿಗೆ 50,000 ರೂ. ನಗದು ಪುರಸ್ಕಾರ

Views: 284

ಕನ್ನಡ ಕರಾವಳಿ ಸುದ್ದಿ:  ಸುಜ್ಞಾನ ಪಿಯು ಕಾಲೇಜು ತನ್ನ ಶೈಕ್ಷಣಿಕ ಪಯಣದ ಮೊದಲ ವರ್ಷದಲ್ಲೇ ಅದ್ಭುತ ಇತಿಹಾಸ ನಿರ್ಮಿಸಿದೆ. 2025-26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕಾಲೇಜಿನ ಪ್ರಥಮ ಬ್ಯಾಚ್ ಶೇ. 100ರಷ್ಟು ಫಲಿತಾಂಶ ದಾಖಲಿಸಿದ್ದು, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 9ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ಸ್ಪಂದನಾ ಆರ್. ಶೆಟ್ಟಿ ಅವರಿಗೆ ಸಂಸ್ಥೆಯ ವತಿಯಿಂದ 50,000 ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಶುಕ್ರವಾರ ಸಂಸ್ಥೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಾಧಕರನ್ನು ಅಭಿನಂದಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, “ಕೇವಲ 11 ವಿದ್ಯಾರ್ಥಿಗಳಿಂದ ಆರಂಭವಾದ ನಮ್ಮ ಸಂಸ್ಥೆ ಇಂದು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯ. ಪ್ರಥಮ ಬ್ಯಾಚ್‌ನಲ್ಲೇ ರ‍್ಯಾಂಕ್ ಪಡೆದರೆ 50,000 ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದೆವು, ಅದರಂತೆ ಇಂದು ಸ್ಪಂದನಾ ಅವರಿಗೆ ನಗದು ನೀಡಿ ಗೌರವಿಸಿದ್ದೇವೆ,” ಎಂದು ತಿಳಿಸಿದರು.

ಸಂಸ್ಥೆಯ ಈ ಯಶಸ್ಸಿನ ವಿಶೇಷವೆಂದರೆ, ಎಸ್‌ಎಸ್‌ಎಲ್‌ಸಿಯಲ್ಲಿ ಕಡಿಮೆ ಅಂಕ ಪಡೆದಿದ್ದ ವಿದ್ಯಾರ್ಥಿಗಳು ಇಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.

ಸ್ಪಂದನಾ ಆರ್. ಶೆಟ್ಟಿ: ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 84 ಪಡೆದಿದ್ದ ಈಕೆ, ಪಿಯುಸಿಯಲ್ಲಿ 592 (98.7%) ಅಂಕಗಳೊಂದಿಗೆ ರಾಜ್ಯಕ್ಕೆ 9ನೇ ರ‍್ಯಾಂಕ್ ಅಲಂಕರಿಸಿದ್ದಾರೆ. ಸೋಮನ್ ಗೌಡ ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 49.28 ಪಡೆದಿದ್ದ ವಿದ್ಯಾರ್ಥಿ, ಪಿಯುಸಿಯಲ್ಲಿ ಶೇ. 88.50 ಗಳಿಸಿ ಬೆರಗುಗೊಳಿಸಿದ್ದಾರೆ.

ರಾಘವೇಂದ್ರ: ಶೇ. 51.52 ಅಂಕ ಪಡೆದಿದ್ದ ಈತ, ಈಗ ಶೇ. 89.77 ಗಳಿಸಿ ಸಾಧನೆ ಮೆರೆದಿದ್ದಾರೆ ಎಂದು ಡಾ.ರಮೇಶ್ ಶೆಟ್ಟಿ ಹೇಳಿದರು.

ಸಂಸ್ಥೆಯ ಕೋಶಾಧಿಕಾರಿ ಭರತ್ ಶೆಟ್ಟಿ ಮಾತನಾಡಿ, “ದಾಖಲಾತಿ ಸಮಯದಲ್ಲಿ ಶೇ. 95ಕ್ಕಿಂತ ಹೆಚ್ಚು ಅಂಕ ಪಡೆದವರು ಕೇವಲ 9 ಮಂದಿ ಇದ್ದರು. ಆದರೆ ಇಂದು ಫಲಿತಾಂಶ ಬಂದಾಗ ಆ ಸಂಖ್ಯೆ 22ಕ್ಕೆ ಏರಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಂಕಲ್ಪ ಮಾಡಿದರೆ ಎಂತಹ ಫಲಿತಾಂಶವನ್ನಾದರೂ ಬದಲಾಯಿಸಬಹುದು ಎಂಬುದಕ್ಕೆ ಇದೇ ಸಾಕ್ಷಿ,” ಎಂದರು.

ವಿಜ್ಞಾನ ವಿಭಾಗದಲ್ಲಿ ಸಮ್ಮೆದ ಪಾರೀಸ ಭೋಜ 587 (97.83%) ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕನ್ನಡ ಮಾಧ್ಯಮದಿಂದ ಬಂದ ಇವರು ಫಿಸಿಕ್ಸ್ ಮತ್ತು ಮ್ಯಾಥ್ಸ್‌ನಲ್ಲಿ 100ಕ್ಕೆ 100 ಅಂಕ ಗಳಿಸಿರುವುದು ಶ್ಲಾಘನೀಯ. ಇವರೊಂದಿಗೆ ಸಿಂಚನಾ (586), ಪ್ರತೀಕ್ಷಾ ಎಚ್. ಶೆಟ್ಟಿ (586), ಎನ್. ರಕ್ಷಾ (584) ಸೇರಿದಂತೆ ಅನೇಕ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಭರತ್ ಶೆಟ್ಟಿ ಹೇಳಿದರು..

ಸಂಸ್ಥೆಯ ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, “ಜುಲೈನಲ್ಲಿ ತಡವಾಗಿ ಕಾಲೇಜು ಆರಂಭವಾದರೂ, ಗುಣಮಟ್ಟದ ಬೋಧನೆಯಿಂದಾಗಿ 125 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. 22 ವಿದ್ಯಾರ್ಥಿಗಳು ಶೇ. 95ಕ್ಕಿಂತ ಹೆಚ್ಚು, 57 ವಿದ್ಯಾರ್ಥಿಗಳು ಶೇ. 90ಕ್ಕಿಂತ ಅಧಿಕ ಅಂಕ ಗಳಿಸಿರುವುದು ಸಂಸ್ಥೆಯ ಶೈಕ್ಷಣಿಕ ಶಿಸ್ತಿಗೆ ಹಿಡಿದ ಕನ್ನಡಿ,” ಎಂದು ಹರ್ಷ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಬಾರ್ಕೂರಿನ ನ್ಯಾಷನಲ್ ಜೂನಿಯರ್ ಕಾಲೇಜಿನ ಜವಾಬ್ದಾರಿಯನ್ನೂ ಸಂಸ್ಥೆ ವಹಿಸಿಕೊಂಡಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಇಂತಹುದೇ ಉನ್ನತ ಶಿಕ್ಷಣ ನೀಡಲು ಸಜ್ಜಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿತು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಂಶುಪಾಲರಾದ ರಂಜನ್ ಬಿ. ಶೆಟ್ಟಿ, ಬೋಧಕ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Back to top button
error: Content is protected !!