ಚಿಕ್ಕಮಗಳೂರು ಮುಳ್ಳಯ್ಯನಗಿರಿ ಚಾರಣಕ್ಕೆಂದು ತೆರಳಿದ್ದ ಮತ್ತೋರ್ವ 10ನೇ ತರಗತಿ ವಿದ್ಯಾರ್ಥಿನಿ ನಾಪತ್ತೆ
Views: 109
ಕನ್ನಡ ಕರಾವಳಿ ಸುದ್ದಿ: ಕೊಡಗಿನಲ್ಲಿ ಚಾರಣಕ್ಕೆಂದು ತೆರಳಿದ್ದ ಶರಣ್ಯ ನಾಪತ್ತೆಯಾಗಿ ವಾಪಸಾದ ಬೆನ್ನಲ್ಲೇ ಅದೇ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದ 40 ಜನರ ತಂಡದಲ್ಲಿ 16 ವರ್ಷದ ವಿದ್ಯಾರ್ಥಿನಿ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ನಾಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಭಾಗದಲ್ಲಿ ನಡೆದಿದೆ.
ಶ್ರೀನಂದನ (16) ನಾಪತ್ತೆಯಾಗಿರುವ 10ನೇ ತರಗತಿ ವಿದ್ಯಾರ್ಥಿನಿ. ಕೇರಳದಿಂದ ಬಂದಿದ್ದ 40 ಜನರ ತಂಡ ಮಂಗಳವಾರ ಸಂಜೆ 6:30ರ ಸುಮಾರಿಗೆ ಚಂದ್ರದ್ರೋಣ ಸಾಲಿನಲ್ಲಿ ಪ್ರಕೃತಿ ಸೌಂದರ್ಯ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಕತ್ತಲಾಗಿದ್ದರಿಂದ ಶ್ರೀನಂದನ ನಾಪತ್ತೆಯಾಗಿದ್ದಾಳೆ. ಜೊತೆಗಿದ್ದವರು ಹುಡುಕಾಡಿದರೂ ಪತ್ತೆಯಾಗಿಲ್ಲ.
ಪರ್ವತದ ಸುಂದರ ತಾಣಗಳನ್ನು ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ನಂದನ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಸದ್ಯ ಘಟನೆಯಿಂದ ಕುಟುಂಬ ಸದಸ್ಯರು ಕಂಗಾಲಾಗಿದ್ದಾರೆ.
ಯುವತಿಯ ನಾಪತ್ತೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






