ಪ್ರವಾಸೋದ್ಯಮ

ಕೊಡಗು ಬೆಟ್ಟಕ್ಕೆ ಟ್ರಕ್ಕಿಂಗ್ ಹೋದ ಮಹಿಳೆ ನಿಗೂಢ ನಾಪತ್ತೆ..ಹಲವು ಅನುಮಾನ!

Views: 89

ಕನ್ನಡ ಕರಾವಳಿ ಸುದ್ದಿ: ಕೊಡಗು ಜಿಲ್ಲೆಯ  ತಡಿಯಾಂಡಮೋಳ್ ಬೆಟ್ಟ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾದ ಶರಣ್ಯ (36)  ಗುರುವಾರ ಬೆಳಿಗ್ಗೆಯಿಂದಲೇ ಕಾಣೆಯಾಗಿರುವ ಇವರ ಪತ್ತೆಗಾಗಿ ಈಗ ಜಿಲ್ಲಾ ಪೊಲೀಸ್ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಬೃಹತ್ ಶೋಧ ಕಾರ್ಯಾಚರಣೆ ಕೈಗೊಂಡಿವೆ.

ಗುರುವಾರ ಬೆಳಿಗ್ಗೆ ಅರಣ್ಯ ಇಲಾಖೆಯ ಅನುಮತಿ ಪಡೆದ ನಂತರ ಶರಣ್ಯ ಅವರು ಚಾರಣ ಆರಂಭಿಸಿದ್ದರು. ಅವರು ಏಕಾಂಗಿಯಾಗಿ ಬಂದಿದ್ದರಿಂದ, ಆ ಪ್ರದೇಶದಲ್ಲಿ ಕಾಡಾನೆಗಳ ಹಾವಳಿಯ ಬಗ್ಗೆ ಎಚ್ಚರಿಸಿದ್ದ ಅರಣ್ಯಾಧಿಕಾರಿಗಳು, ಇತರ ಚಾರಣಿಗರ ತಂಡದೊಂದಿಗೆ ಹೋಗುವಂತೆ ಸೂಚಿಸಿದ್ದರು. ಅದರಂತೆ ಅವರು ಇತರರೊಂದಿಗೆ ಬೆಟ್ಟ ಏರಿದ್ದರು. ಆದರೆ ಸಂಜೆ ಹೊತ್ತಿಗೆ ಎಲ್ಲ ಚಾರಣಿಗರು ಶಿಖರದಿಂದ ಕೆಳಗೆ ಹಿಂತಿರುಗಿದರೂ ಶರಣ್ಯ ಮಾತ್ರ ಬರಲಿಲ್ಲ. ಇದರಿಂದ ಆತಂಕಗೊಂಡ ಅಧಿಕಾರಿಗಳು ತಕ್ಷಣವೇ ಹುಡುಕಾಟ ಆರಂಭಿಸಿದರು.

ಚೆಕ್ ಪೋಸ್ಟ್‌ನಲ್ಲಿದ್ದ ಅರಣ್ಯ ಸಿಬ್ಬಂದಿ ಗುರುವಾರ ಸಂಜೆಯೇ ಕಾರ್ಯಪ್ರವೃತ್ತರಾಗಿ ಮಧ್ಯರಾತ್ರಿಯವರೆಗೂ ಬೆಟ್ಟದ ತಪ್ಪಲು ಮತ್ತು ಕಾಡಿನೊಳಗೆ ಹುಡುಕಾಟ ನಡೆಸಿದರು. ಆದಾಗ್ಯೂ, ಮಹಿಳೆಯ ಯಾವುದೇ ಸುಳಿವು ಪತ್ತೆಯಾಗಿಲ್ಲ. ಪ್ರದೇಶವು ದಟ್ಟ ಅರಣ್ಯದಿಂದ ಕೂಡಿದ್ದು, ಕಾಡು ಪ್ರಾಣಿಗಳ ಭೀತಿಯೂ ಇರುವುದರಿಂದ ರಾತ್ರಿಯ ಶೋಧ ಕಾರ್ಯವು ಅರಣ್ಯ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿತ್ತು.

ಮಡಿಕೇರಿ ಡಿಸಿಎಫ್ ಅಭಿಷೇಕ್ ಮಾಹಿತಿ ನೀಡಿದಂತೆ, ಒಟ್ಟು ಐದು ವಿಶೇಷ ತಂಡಗಳನ್ನು ರಚಿಸಲಾಗಿದೆ. ಇದರಲ್ಲಿ ಎರಡು ಪೊಲೀಸ್ ತಂಡಗಳು ಮತ್ತು ಅರಣ್ಯ ಇಲಾಖೆಯ ಮೂರು ತಂಡಗಳು ಸ್ಥಳೀಯರ ನೆರವಿನೊಂದಿಗೆ ಬೆಟ್ಟದ ಮೂಲೆ ಮೂಲೆಯನ್ನು ಜಾಲಾಡುತ್ತಿವೆ. ಶೋಧ ಕಾರ್ಯಕ್ಕಾಗಿ ಆಧುನಿಕ ಡ್ರೋನ್ ಕೆಮೆರಾಗಳು ಮತ್ತು ಶ್ವಾನ ದಳವನ್ನೂ ಬಳಸಲಾಗುತ್ತಿದೆ.

ಕೊಡಗು ಎಸ್ಪಿ ಬಿಂದು ಮಣಿ ಆರ್‌ಎನ್ ಅವರು ಮಾತನಾಡಿ, “ತಡಿಯಾಂಡಮೋಳ್ ಚಾರಣ ಮಾರ್ಗವು ಅಷ್ಟೊಂದು ಕಠಿಣವಾದುದಲ್ಲ, ಸಾಮಾನ್ಯವಾಗಿ 2-3 ಗಂಟೆಗಳಲ್ಲಿ ಯಾರೇ ಆದರೂ ಹಿಂತಿರುಗಬಹುದು. ಹೀಗಿದ್ದರೂ ಮಹಿಳೆ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅಪಹರಣ ಸೇರಿದಂತೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಮಹಿಳೆಯ ಕುಟುಂಬದವರನ್ನು ಪತ್ತೆಹಚ್ಚಿ ಮಾಹಿತಿ ನೀಡಲಾಗಿದೆ,” ಎಂದು ತಿಳಿಸಿದ್ದಾರೆ.

Related Articles

Back to top button
error: Content is protected !!