ಕಾರು ಅಡ್ಡಗಟ್ಟಿ 38 ಲಕ್ಷ ರೂ. ಹಣ ದೋಚಿದ ದುಷ್ಕರ್ಮಿಗಳು
Views: 36
ಕನ್ನಡ ಕರಾವಳಿ ಸುದ್ದಿ: ಕಾರು ಅಡ್ಡಗಟ್ಟಿ 38 ಲಕ್ಷ ರೂ. ಹಣ ದೋಚಿದ ಘಟನೆ ಹೊನ್ನಾಳಿ ತಾಲೂಕಿನ ಅರಕೆರೆ ಕಾಲೋನಿಯ ಸಮೀಪದ ನಿರ್ಜನ ಪ್ರದೇಶದಲ್ಲಿ ನಡೆದಿದೆ.
ಭದ್ರಾವತಿಯ ಮಾಲತೇಶ್ ಹಣ ಕಳೆದುಕೊಂಡವರು. ಇವರು ಹಗರಿಬೊಮ್ಮನಹಳ್ಳಿಯಲ್ಲಿ ಓಮ್ಪಿ ಕಾರಲ್ಲಿ ಹಣ ತರುತ್ತಿದ್ದರು. 76 ಲಕ್ಷ ರೂ. ಹಣವನ್ನು ಒಂದು ಬ್ಯಾಗಿನಲ್ಲಿ 38 ಲಕ್ಷ ರೂ. ಹಣವನ್ನು ಮತ್ತೊಂದು ಬ್ಯಾಗಿನಲ್ಲಿ ಹಾಗೂ ಜೇಬಿನಲ್ಲಿ ಎರಡು ಲಕ್ಷ ಇಟ್ಟುಕೊಂಡು ಬರುತ್ತಿದ್ದರು.
ಮಲೆಬೆನ್ನೂರು ಸಮೀಪ ಕಾರೊಂದು ಇವರ ವಾಹನಕ್ಕೆ ಅಡ್ಡಗಟ್ಟಿ ಡಿಕ್ಕಿ ಹೊಡೆದಿದೆ. ಇದರಿಂದ ಭಯಗೊಂಡ ಅವರು ಕಾರನ್ನು ಜೋರಾಗಿ ಓಡಿಸಿಕೊಂಡು ಹೋಗಿದ್ದಾರೆ. ಬಳಿ ಹಿಂಬಾಲಿಸಿಕೊಂಡು ಬಂದ ಗ್ಯಾಂಗ್ ನಿರ್ಜನ ಪ್ರದೇಶವಾದ ಅರಕೆರೆ ಕಾಲೋನಿ ಸಮೀಪ ವಾಹನವನ್ನು ತಡೆದು ನಾಲ್ವರು ದುಷ್ಕರ್ಮಿಗಳು, ಮಾಲತೇಶ್ ಮತ್ತು ಅವರ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಕಾರಿನಲ್ಲಿದ್ದ 38 ಲಕ್ಷ ರೂ. ನಗದು ಮತ್ತು ಮೊಬೈಲ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಪ್ರಾಣಭಯದಿಂದ ಮಾಲತೇಶ್ ತಕ್ಷಣ ಮಲೆಬೆನ್ನೂರಿಗೆ ಮರಳಿ, ತನ್ನ ಬಳಿ ಇದ್ದ ಉಳಿದ ಹಣವನ್ನು ಸಂಬಂಧಿಕರ ಮನೆಯಲ್ಲಿಟ್ಟು ನೇರವಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಹೊನ್ನಾಳಿ ಪೊಲೀಸರು ದೂರು ದಾಖಲಿಸಿ, ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.






