ಶಿಕ್ಷಣ

ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆ: “ಬೆಂಕಿಯಿಲ್ಲದ ಅಡುಗೆ” ಹಾಗೂ “ವಿಜ್ಞಾನ ಪ್ರದರ್ಶನ” ಕಾರ್ಯಕ್ರಮ

Views: 0

ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಬೆಂಕಿಯಿಲ್ಲದ ಅಡುಗೆ” ಹಾಗೂ “ವಿಜ್ಞಾನ ಪ್ರದರ್ಶನ” ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಿತು.

ಬೆಂಕಿಯಿಲ್ಲದ ಅಡುಗೆ ಸ್ಪರ್ಧೆಯಲ್ಲಿ ಅಗ್ನಿ, ವರುಣ್, ತೇಜ್ ಹಾಗೂ ಪೃಥ್ವಿ ಸೇರಿದಂತೆ ಹಲವು ವಿದ್ಯಾರ್ಥಿಗಳು ಒಳ್ಳೆಯ ಉತ್ಸಾಹದಿಂದ ಭಾಗವಹಿಸಿ, ವೈವಿಧ್ಯಮಯ ಮತ್ತು ರುಚಿಕರ ಆಹಾರ ಪದಾರ್ಥಗಳನ್ನು ತಯಾರಿಸಿದರು. ಈ ಸಂದರ್ಭದಲ್ಲಿ ಪ್ರೇಕ್ಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಮೆಚ್ಚಿ ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

ಇದೇ ವೇಳೆ, ವಿದ್ಯಾರ್ಥಿಗಳು ತಯಾರಿಸಿದ ಆಹಾರವನ್ನು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿ ಸ್ವೀಕರಿಸಿದರು. ವಿಜ್ಞಾನ ಪ್ರದರ್ಶನದಲ್ಲಿ ಮಕ್ಕಳು ತಮ್ಮ ವೈಜ್ಞಾನಿಕ ಚಿಂತನೆ ಮತ್ತು ನೈಪುಣ್ಯತೆಯನ್ನು ತೋರಿಸಿ, ಹಲವಾರು ಆಕರ್ಷಕ ಮಾದರಿಗಳನ್ನು ಪ್ರದರ್ಶಿಸಿದರು. ಅವರ ಪ್ರಯತ್ನವನ್ನು ಉಪಸ್ಥಿತರಿದ್ದ ಅತಿಥಿಗಳು ಹಾಗೂ ಪೋಷಕರು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲಾ ಸಂಚಾಲಕರಾದ ಶ್ರೀ ಸಂತೋಷ್ ಶೆಟ್ಟಿ ಅವರು, ಇಂತಹ ಕಾರ್ಯಕ್ರಮಗಳು ಇಂದಿನ ಆಧುನಿಕ ಜೀವನದಲ್ಲಿ ಅತ್ಯಂತ ಮುಖ್ಯವಾಗಿದ್ದು, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುತ್ತವೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಇಂತಹ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಶ್ರೀ ಸುಬ್ರಹ್ಮಣ್ಯ ಶೆಟ್ಟಿ ಅವರು, ಶಾಲೆಯ ಕಾರ್ಯಚಟುವಟಿಕೆಗಳನ್ನು ಮೆಚ್ಚಿ, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮತ್ತು ಜ್ಞಾನಾಭಿವೃದ್ಧಿಗೆ ಇಂತಹ ಕಾರ್ಯಕ್ರಮಗಳು ಬಹಳ ಉಪಯುಕ್ತವಾಗಿವೆ ಎಂದು ಅಭಿಪ್ರಾಯಪಟ್ಟರು. ಅವರು ಮುಂದಿನ ಪೀಳಿಗೆಗೆ ಇಂತಹ ಶಿಕ್ಷಣದ ಮಹತ್ವವನ್ನು ವಿವರಿಸಿದರು.

ಪ್ರಾಂಶುಪಾಲರಾದ ಸುಪ್ರಿತ ಪೂಜಾರಿ ಅವರು, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಕೌಶಲ್ಯ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಾಯಕವಾಗುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.

Related Articles

Back to top button
error: Content is protected !!