ವಿದ್ಯಾರ್ಥಿಗೆ ತರಗತಿಯಲ್ಲಿಯೇ ‘ಭಯೋತ್ಪಾದಕ’ ಎಂದು ಕರೆದ ಉಪನ್ಯಾಸಕ ಅಮಾನತು
Views: 36
ಕನ್ನಡ ಕರಾವಳಿ ಸುದ್ದಿ: ಬೆಂಗಳೂರು ಖಾಸಗಿ ವಿಶ್ವವಿದ್ಯಾಲಯವೊಂದರ ಪ್ರಾಧ್ಯಾಪಕರೊಬ್ಬರು ವಿದ್ಯಾ ರ್ಥಿಯ ಧರ್ಮವನ್ನು ಗುರಿಯಾಗಿಸಿಕೊಂಡು ಅವಮಾನಿಸಿರುವ ಆರೋಪ ಪ್ರಕರಣ ನಗರದಲ್ಲಿ ವರದಿಯಾಗಿದೆ.
ತರಗತಿಯಲ್ಲಿ ಪಾಠ ಮಾಡುತ್ತಿದ್ದ ವೇಳೆ ವಿದ್ಯಾರ್ಥಿಯ ಧರ್ಮವನ್ನು ಉಲ್ಲೇಖಿಸಿ ಪದೇ ಪದೆ ‘ಭಯೋತ್ಪಾದಕ’ ಎಂದು ಕರೆದಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ಅರೆಕಾಲಿಕ ಪ್ರಾಧ್ಯಾಪಕರೊಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತಿಳಿಸಿದೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎನ್ ಸಿಆರ್ ದಾಖಲಾಗಿದೆ.
ಆರೋಪವೇನು?:
ಪ್ರಾಧ್ಯಾಪಕ ಶುಕ್ರವಾರ ಬಿಬಿಎ ಅನಾಲಿಟಿಕ್ಸ್ ತರಗತಿಯಲ್ಲಿ ಸುಮಾರು 60 ವಿದ್ಯಾರ್ಥಿಗಳ ಸಮ್ಮುಖದಲ್ಲಿ ಓರ್ವ ವಿದ್ಯಾರ್ಥಿಯನ್ನು ಉದ್ದೇಶಿಸಿ ಪದೇ ಪದೆ ಭಯೋತ್ಪಾದಕ ಎಂದು ಕರೆದಿದ್ದಾರೆ. ನಿಮ್ಮಂತಹವರಿಂದಲೇ ಇರಾನ್ ಯುದ್ಧ ನಡೆಯಿತು ಮತ್ತು ಟ್ರಂಪ್ ನಿನ್ನನ್ನು ಕರೆದೊಯ್ಯುತ್ತಾರೆ ಎಂದು ನಿಂದನಾತ್ಮಕ ಮಾತುಗಳನ್ನು ಆಡಿದ್ದಾರೆ ಎಂದು ದೂರಲಾಗಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋ ವೊಂದು ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಖಂಡಿಸಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆ ನೀಡಿದ ದೂರಿನ ಮೇರೆಗೆ ಗಿರಿನಗರ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ವಿದ್ಯಾರ್ಥಿ ದೂರು ನೀಡಲು ಸಮಯಾವಕಾಶ ಕೇಳಿದ್ದಾರೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಪ್ರತಿಕ್ರಿಯೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ. ಜಗಲಾಸರ್ ತಿಳಿಸಿದ್ದಾರೆ.






