ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ ಪುತ್ರಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಯಶಸ್ವಿ:ಮಾಹಿತಿ ಹಂಚಿಕೊಂಡ ಅನಯಾ ಬಂಗಾರ್
Views: 204
ಕನ್ನಡ ಕರಾವಳಿ ಸುದ್ದಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮತ್ತು ಮಾಜಿ ಕೋಚ್ ಸಂಜಯ್ ಬಂಗಾರ್ ಪುತ್ರಿ ಅನಯಾ ಬಂಗಾರ್ (ಹಿಂದಿನ ಹೆಸರು ಆರ್ಯನ್) ತಮ್ಮ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿರುವ ಬಗ್ಗೆ ತಿಳಿಸಿದ್ದಾರೆ. ಸೊಶಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಅನಯಾ ಅವರ ಈ ಬದಲಾವಣೆಯ ನಿರ್ಧಾರಕ್ಕೆ ಮೊದಲು ಅವರ ಸಹೋದರ ಅಥರ್ವ ಬೆಂಬಲ ನೀಡಿದ್ದರು. ನಂತರ ತಂದೆ ಸಂಜಯ್ ಬಂಗಾರ್ ಮತ್ತು ತಾಯಿ ಕೂಡ ಮಗಳ ನಿರ್ಧಾರಕ್ಕೆ ಸಾಥ್ ನೀಡಿದ್ದಾರೆ. ವಿಶೇಷವೆಂದರೆ ಈ ಶಸ್ತ್ರಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸಂಜಯ್ ಬಂಗಾರ್ ಅವರೇ ಭರಿಸಿದ್ದಾರೆ ಎಂದು ಅನಯಾ ತಿಳಿಸಿದ್ದಾರೆ.
ಅನಯಾ ಕೂಡ ತಮ್ಮ ತಂದೆಯಂತೆ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದರು. ಕ್ಲಬ್ ಮಟ್ಟದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಆದರೆ, ಹಾರ್ಮೋನ್ ಚಿಕಿತ್ಸೆ ಮತ್ತು ಲಿಂಗ ಬದಲಾವಣೆಯ ನಂತರ ಕ್ರಿಕೆಟ್ ಆಡಲು ಅವರಿಗೆ ಅವಕಾಶ ಸಿಗುತ್ತಿಲ್ಲ. ಕ್ರಿಕೆಟ್ ಲೋಕದಲ್ಲಿ ಇನ್ನು ನಿನಗೆ ಜಾಗವಿಲ್ಲ ಎಂದು ಸ್ವತಃ ತಂದೆಯೇ ಹೇಳಿದಾಗ ಅನಯಾ ತೀವ್ರ ನೋವು ಅನುಭವಿಸಿದ್ದರು. ಸಮಾಜದ ನಿಯಮಗಳು ಮತ್ತು ಕ್ರೀಡಾ ಕಾನೂನುಗಳ ಕಾರಣದಿಂದಾಗಿ ಅವರು ತಮ್ಮ ನೆಚ್ಚಿನ ಕ್ರೀಡೆಯನ್ನು ತ್ಯಾಗ ಮಾಡಬೇಕಾಯಿತು.
ಅನಯಾ ಕಳೆದ ಹಲವು ಸಮಯದಿಂದ ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿಗೆ (HRT) ಒಳಗಾಗಿದ್ದರು. ಈಗ ಶಸ್ತ್ರಚಿಕಿತ್ಸೆಯೂ ಮುಗಿದಿದ್ದು, ತಮ್ಮ ಅಸ್ಮಿತೆಯನ್ನು ಕಂಡುಕೊಂಡಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಅವರು ಟ್ರಾನ್ಸ್ ಜನರ ಹಕ್ಕುಗಳ ಪರವಾಗಿ ಧ್ವನಿ ಎತ್ತುತ್ತಿದ್ದಾರೆ.






