ಶಿಕ್ಷಣ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಉಪಸಮಿತಿಯ ಸದಸ್ಯರಾಗಿ, ಮೈಸೂರು ವಿಭಾಗದ ಪ್ರತಿನಿಧಿಯಾಗಿ ಕನ್ನಡ ಭಾಷಾ ಶಿಕ್ಷಕಿ ಮಾಲತಿ ವಕ್ವಾಡಿ ಆಯ್ಕೆ
Views: 135
ಕನ್ನಡ ಕರಾವಳಿ ಸುದ್ದಿ: SSLC ಪರೀಕ್ಷೆಗಳಲ್ಲಿ ಕನ್ನಡ ನಾಡಿನಲ್ಲಿ ಮಕ್ಕಳು ಕನ್ನಡದಲ್ಲಿ ಏಕೆ ನಪಾಸ್ ಆಗುತ್ತಾರೆ, ನೈಜ ಕಾರಣಗಳನ್ನು ಹುಡುಕಿ, ಪರಿಹಾರೋಪಾಯ ಕಂಡುಕೊಳ್ಳುವ ಸಲುವಾಗಿ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನೇಮಿಸಲಾದ ಉಪಸಮಿತಿಯ ಸದಸ್ಯರಾಗಿ ಮೈಸೂರು ವಿಭಾಗದ ಪ್ರತಿನಿಧಿಯಾಗಿ ಉಡುಪಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆ ಮಲ್ಪೆ ಇಲ್ಲಿಯ ಕನ್ನಡ ಭಾಷಾ ಶಿಕ್ಷಕಿ ಶ್ರೀಮತಿ ಮಾಲತಿ ವಕ್ವಾಡಿ ಇವರು ಆಯ್ಕೆಗೊಂಡಿರುತ್ತಾರೆ.
ಪ್ರಸ್ತುತ ಮಾಲತಿ ಮೇಡಂ ರವರು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಪ್ರತಿನಿಧಿಯು ಆಗಿರುತ್ತಾರೆ. ಉಡುಪಿ ವಲಯ ಕನ್ನಡ ಭಾಷೆ ಶಿಕ್ಷಕರ ಸಂಘದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಪ್ರೌಢಶಾಲಾ ಕನ್ನಡ ವಿಭಾಗದ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಮಾಲತಿ ವಕ್ವಾಡಿ ಪರಿಚಯ: 2024-25ನೇ ಸಾಲಿನ ಪ್ರೌಢಶಾಲಾ ವಿಭಾಗದಿಂದ ಉತ್ತಮ ಜಿಲ್ಲಾಮಟ್ಟದ ಶಿಕ್ಷಕ ಪ್ರಶಸ್ತಿಗೆ ಬಾಜನರಾಗಿದ್ದು, ಕವಯಿತ್ರಿಯಾಗಿ, ವಿಮರ್ಶಕಿಯಾಗಿ, ಉತ್ತಮ ಬರಹಗಾರ್ತಿಯಾಗಿ, ಸಾಹಿತ್ಯದ ಸಾರಥಿಯಾಗಿ ಗುರುತಿಸಿಕೊಂಡಿರುವ ಇವರು ಶಾಲೆಯಲ್ಲಿ ಪಾಠ ಪ್ರವಚನದ ಜೊತೆಗೆ ವಿದ್ಯಾರ್ಥಿಗಳ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸಾಧನೆಗೆ ನೆರವಾಗಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದು, ತಮ್ಮ ಅಪಾರ ವಿದ್ವತ್ತು ಮತ್ತು ನಡೆ-ನುಡಿಯಿಂದ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿ ಶಾಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶಾಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದವರೆಗೂ ಕೊಂಡೊಯ್ದಿದ್ದಾರೆ.
ಕುಂದಾಪುರ ತಾಲೂಕಿನ ವಕ್ವಾಡಿ ಶೀನ ಶೆಟ್ಟಿಗಾರ್ ಮತ್ತು ವಸಂತಿ ದಂಪತಿಯ ಪುತ್ರಿಯಾಗಿ, ಪ್ರಾಥಮಿಕ ಶಿಕ್ಷಣವನ್ನು ವಕ್ವಾಡಿಯಲ್ಲಿ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ತೆಕ್ಕಟ್ಟೆಯಲ್ಲಿ ಪೂರೈಸಿ, ಟಿಸಿಎಚ್ ಪದವಿಯನ್ನು ಉಡುಪಿಯಲ್ಲಿ, ಬಿ.ಎ. ಎಂ.ಎ ಮತ್ತು ಎಂ.ಎಡ್ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ ಮತ್ತು ಮೈಸೂರಿನಲ್ಲಿ ಪಡೆದಿದ್ದಾರೆ. ಎಂ.ಎಡ್, ಪದವಿಯನ್ನು ಮೈಸೂರು ಮುಕ್ತ ವಿವಿಯಲ್ಲಿ ರಾಜ್ಯಮಟ್ಟದ 9ನೇ ರ‌್ಯಾಂಕ್ ಪಡೆದಿರುತ್ತಾರೆ.








