ಬೆಳ್ತಂಗಡಿಯಲ್ಲಿ ಚೂರಿ ತೋರಿಸಿ ಕಾಲೇಜು ವಿದ್ಯಾರ್ಥಿನಿ ಅಪಹರಣಕ್ಕೆ ಯತ್ನ
Views: 72
ಕನ್ನಡ ಕರಾವಳಿ ಸುದ್ದಿ: ಕಾಲೇಜಿಗೆ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಅಪರಿಚಿತ ತಂಡವೊಂದು ಅಪಹರಿಸಲು ಯತ್ನಿಸಿ, ಚೂರಿಯಿಂದ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಬೆಳ್ತಂಗಡಿ ನಗರದ ಸುದೇಮುಗೇರು ನಿವಾಸಿಯಾಗಿರುವ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಈ ಹಲ್ಲೆಗೆ ಒಳಗಾದವರು.
ಫೆಬ್ರವರಿ 9ರಂದು ಬೆಳಿಗ್ಗೆ ಸುಮಾರು 8.30ರ ವೇಳೆಗೆ ಬಾಲಕಿ ತನ್ನ ಸ್ಕೂಟರ್‌ನಲ್ಲಿ ಸಂತೆಕಟ್ಟೆಗೆ ಬಸ್ ಹಿಡಿಯಲು ಹೋಗುತ್ತಿದ್ದರು. ಈ ವೇಳೆ ನಂಬರ್ ಪ್ಲೇಟ್‌ಗೆ ಬಟ್ಟೆ ಕಟ್ಟಿದ ಮಾರುತಿ ಓಮ್ಮಿ ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು, ಏಕಾಏಕಿ ಸ್ಕೂಟರ್‌ಗೆ ಅಡ್ಡಗಟ್ಟಿದ್ದಾರೆ. ಬಾಲಕಿಯನ್ನು ಬಲವಂತವಾಗಿ ಕಾರಿನೊಳಗೆ ಎಳೆದುಕೊಂಡು ಹೋಗಲು ತಂಡ ಪ್ರಯತ್ನಿಸಿದೆ ಎನ್ನಲಾಗಿದೆ.ತನ್ನನ್ನು ಎಳೆದೊಯ್ಯಲು ಯತ್ನಿಸಿದವರ ವಿರುದ್ಧ ವಿದ್ಯಾರ್ಥಿನಿ ಧೈರ್ಯದಿಂದ ಪ್ರತಿರೋಧ ಒಡ್ಡಿದ್ದಾಳೆ. ಅಲ್ಲದೆ ಕಿರುಚಾಡುತ್ತಾ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ಅಷ್ಟರಲ್ಲಿ ಹಿಂಭಾಗದಿಂದ ಮತ್ತೊಂದು ಸ್ಕೂಟರ್ ಬರುತ್ತಿರುವುದನ್ನು ಗಮನಿಸಿದ ದುಷ್ಕರ್ಮಿಗಳು, ಬಾಲಕಿಯ ಕೈ ಹಾಗೂ ಬೆರಳಿಗೆ ಚೂರಿಯಿಂದ ಇರಿದು ಕಾರಿನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ.
ಗಾಯಗೊಂಡ ವಿದ್ಯಾರ್ಥಿನಿಯನ್ನು ತಕ್ಷಣವೇ ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಬೆಳ್ತಂಗಡಿ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.






