ಇತರೆ

ಕಲ್ಯಾಣ ಮಂಟಪಕ್ಕೆ ತೆರಳುವಾಗ ಮಧುಮಗನಿಗೆ ಚಾಕು ಇರಿತ!

Views: 79

ಕನ್ನಡ ಕರಾವಳಿ ಸುದ್ದಿ: ವಿವಾಹ ಆರತಕ್ಷತೆಗೆ ತೆರಳುತ್ತಿದ್ದ ವರ ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಕೊಳ್ಳೇಗಾಲ ಪಟ್ಟಣದಲ್ಲಿ ಗುರುವಾರ ಸಂಜೆ ನಡೆದಿದೆ.

ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಎಲ್.ರವೀಶ್ (34 ) ಚಾಕು ಇರಿತಕ್ಕೊಳಗಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಮಧುಮಗ. ಎಲ್. ರವೀಶ್ಗೆ ಕೊಳ್ಳೇಗಾಲ ತಾಲೂಕಿನ ಹೊಸ ಅಣಗಳ್ಳಿ ಗ್ರಾಮದ ಯುವತಿಯೊಬ್ಬಳ ಜತೆ  ವಿವಾಹ ನಿಶ್ಚಯವಾಗಿ ಕೊಳ್ಳೇಗಾಲ ಪಟ್ಟಣದ ವೆಂಕಟೇಶ್ವರ ಮಹಲ್ ನಲ್ಲಿ ಆರತಕ್ಷತೆ ಏರ್ಪಡಿಸಲಾಗಿತ್ತು.

ಆರತಕ್ಷತೆ ಕಾರ್ಯಕ್ರಮಕ್ಕೆ ತಮ್ಮ ಗ್ರಾಮದಿಂದ ಕಾರಿನಲ್ಲಿ ಕುಟುಂಬ ಸದಸ್ಯರೊಂದಿಗೆ ತೆರಳುವಾಗ ಕೊಳ್ಳೇಗಾಲದ ಎಂಜಿಎಸ್ವಿ ಕಾಲೇಜು ರಸ್ತೆಯ ಬಳಿ ವರ ತೆರಳುತ್ತಿದ್ದ ಕಾರನ್ನು ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಏಕಾಏಕಿ ಎಲ್. ರವೀಶ್ ಮೇಲೆ ಚಾಕುವಿನಿಂದ ಇರಿಯಲು ಯತ್ನಿಸಿದ್ದು, ರವೀಶ್ನ ಎಡಗೈ ತೊಳಿಗೆ ಚಾಕು ಇರಿದು ರಕ್ತ ಸ್ರಾವವಾಗಿದೆ.

ಸದ್ಯ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ರವೀಶ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಬಗ್ಗೆ ರವೀಶ್ ಮಾಧ್ಯಮದವರ ಜತೆ ಮಾತನಾಡಿ, 6 ತಿಂಗಳ ಹಿಂದೆಯಷ್ಟೇ ನನಗೆ ಹೊಸಅಣಗಳ್ಳಿ ಗ್ರಾಮದ ಯುವತಿಯ ಜತೆ ಎಂಗೇಜ್ಮೇಟ್ ಆಗಿತ್ತು. ಜ.30 ರಂದು ಮದುವೆ ನಿಶ್ಚಯವಾಗಿದ್ದರಿಂದ ಕಾರಿನಲ್ಲಿ ಕಲ್ಯಾಣ ಮಂಟಪಕ್ಕೆ ತೆರಳುವಾಗ ಹಿಂಬದಿಯಿಂದ ಮತ್ತೊಂದು ಕಾರಿನಲ್ಲಿ ಬಂದವರು ನನಗೆ ಏಕಾಏಕಿ ಚಾಕುವಿನಿಂದ ಹಲ್ಲೆ ಮಾಡಿದರು, ಯಾರು ತನ್ನ ಮೇಲೆ ಹಲ್ಲೆ ನಡೆಸಿದರು ಎಂದು ಗೊತ್ತಾಗಲಿಲ್ಲ ಎಂದು ತಿಳಿಸಿದರು. ಸದ್ಯ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ರವೀಶ್ ಬಳಿ ಘಟನೆ ವಿವರ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Articles

Back to top button
error: Content is protected !!