ಇತರೆ

ಧನುಪೂಜೆಗಾಗಿ ಹೊರಟಿದ್ದ ವಿದ್ಯಾರ್ಥಿ ನಿಗೂಢ ನಾಪತ್ತೆ: ಬಾವಿಯಲ್ಲಿ ಬಾಲಕನ ಶವ ಪತ್ತೆ!

Views: 76

ಕನ್ನಡ ಕರಾವಳಿ ಸುದ್ದಿ: ಧನುಪೂಜೆಗಾಗಿ ಮುಂಜಾನೆ ಮನೆಯಿಂದ ದೇವಸ್ಥಾನಕ್ಕೆ ಹೊರಟಿದ್ದ 15 ವರ್ಷದ ಬಾಲಕನೊಬ್ಬ ನಿಗೂಢವಾಗಿ ನಾಪತ್ತೆಯಾಗಿ, ಬಳಿಕ ತೋಟದ ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾದ ಆಘಾತಕಾರಿ ಘಟನೆ ನಡೆದಿದೆ.

ಓಡಿಲ್ನಾಳ ಗ್ರಾಮದ ಸಂಬೋಳ್ಯ ಬರಮೇಲು ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ, ಗೇರುಕಟ್ಟೆ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಮಂತ್ (15) ಮೃತಪಟ್ಟ ದುರ್ದೈವಿ.

ಸುಮಂತ್ ಬುಧವಾರ ಮುಂಜಾನೆ ನಾಳ ದೇವಸ್ಥಾನದಲ್ಲಿ ನಡೆಯುವ ಧನುಪೂಜೆಯಲ್ಲಿ ಪಾಲ್ಗೊಳ್ಳಲು ಮನೆಯಿಂದ ಹೊರಟಿದ್ದನು. ಬಾಲಕ ನಾಪತ್ತೆಯಾದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಬಾಲಕ ಬರುತ್ತಿದ್ದ ದಾರಿಯ ಮಧ್ಯೆ ಇರುವ ಕೆರೆಯೊಂದರ ಬಳಿ ರಕ್ತದ ಕಲೆಗಳು ಕಂಡುಬಂದಿದ್ದು. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆ, ಅಗ್ನಿಶಾಮಕ ದಳ ಮತ್ತು ಸ್ಥಳೀಯರು ತಂಡೋಪತಂಡವಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸಿದರು.ಅಂತಿಮವಾಗಿ ಸಮೀಪದ ತೋಟವೊಂದರ ಬಾವಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ.

ಸ್ಥಳಕ್ಕೆ ಅಧಿಕಾರಿಗಳ ಭೇಟಿ:ಘಟನಾ ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ (BEO) ತಾರಕೇಸರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕನ ಸಾವು ಅಪಘಾತವೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಬ್ಬದ ದಿನವೇ ನಡೆದ ಈ ಘಟನೆಯಿಂದ ಓಡಿಲ್ನಾಳ ಗ್ರಾಮ ಮತ್ತು ಶಾಲಾ ವಲಯದಲ್ಲಿ ಶೋಕ ಮಡುಗಟ್ಟಿದೆ.

Related Articles

Back to top button
error: Content is protected !!