ಇತರೆ

ನಿವೇಶನ ಕೊಡಿಸುವುದಾಗಿ ಲಕ್ಷಾಂತರ ರೂ ಹಣ ಪಡೆದು, ವಾಪಸ್ ಕೊಡಿಸುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಸ್ವಾಮೀಜಿ 

Views: 50

ಕನ್ನಡ ಕರಾವಳಿ ಸುದ್ದಿ: ದೊಡ್ಡಬಳ್ಳಾಪುರ ತಾಲೂಕಿನ ಮೆಳೆಕೋಟೆಯ ಮಹರ್ಷಿ ಶ್ರೀ ವಾಲ್ಮೀಕಿ ಗುರುಕುಲ ಪೀಠದ ಸ್ವಾಮೀಜಿ ಬ್ರಹ್ಮಾನಂದ ಗುರೂಜಿ ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ನಿವೇಶನ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂ ಹಣ ಪಡೆದಿದ್ದಲ್ಲದೆ, ಅದನ್ನು ವಾಪಸ್ ಕೊಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಮಹಿಳೆ ದೂರಿದ್ದಾರೆ. ಮಹಿಳೆ ಮತ್ತು ಆಕೆಯ ಪತಿ ಸ್ವಾಮೀಜಿ ನಿವಾಸದ ಬಳಿಯೇ ವಾಸವಿದ್ದು, ಪರಿಚಯವಾಗಿತ್ತು.

ಸ್ವಾಮೀಜಿ ತಮ್ಮ ಪರಿಚಯದವರಿಂದ ಕಡಿಮೆ ಬೆಲೆಗೆ ಸೈಟ್ ಕೊಡಿಸುವ ಭರವಸೆ ನೀಡಿದ್ದರು. 13 ಲಕ್ಷ ರೂ. ಮೌಲ್ಯದ ಸೈಟ್ ಅನ್ನು 12 ಲಕ್ಷಕ್ಕೆ ಕೊಡಿಸುವುದಾಗಿ ಮಾತುಕತೆ ನಡೆಸಿದ್ದರು. ಆದರೆ, ತಮ್ಮ ಬಳಿ 8ಲಕ್ಷ ರೂ. ಮಾತ್ರ ಇದೆ ಎಂದು ಮಹಿಳೆ ಹೇಳಿದ್ದರು. ಹೀಗಾಗಿ ಉಳಿದ ಹಣಕ್ಕೆ ಸಹಾಯ ಮಾಡುವುದಾಗಿ ಸ್ವಾಮೀಜಿ ಹೇಳಿದ್ದರು ಎಂಬ ಆರೋಪವಿದೆ.

ಮಹಿಳೆ ಬಳಿಯಿದ್ದ 8ಲಕ್ಷ ರೂ.ಗಳಲ್ಲಿ 5 ಲಕ್ಷ ರೂ. ಮುಂಗಡವಾಗಿ ಮತ್ತೊಬ್ಬರಿಗೆ ಸ್ವಾಮೀಜಿ ಕೊಡಿಸಿದ್ದಾರೆ. ಆದರೆ ಒಂದು ವರ್ಷ ಕಳೆದರೂ ನಿವೇಶನ ನೀಡದೆ, ಮುಂಗಡ ಹಣವನ್ನೂ ವಾಪಸ್ ನೀಡದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

ಒಂದು ವರ್ಷವಾದರೂ ನಿವೇಶನ ಕೊಡದ ಕಾರಣ ಹಣವನ್ನು ಮಹಿಳೆ ವಾಪಸ್ ಕೇಳಿದ್ದಾರೆ. ಆಗ ಸ್ವಾಮೀಜಿ, “ರೂಂಗೆ ಬಾ ಹಣ ಕೊಡಿಸುತ್ತೇನೆ, ನಿನಗೆ ಹಣ ಬೇಕು, ನನಗೆ ಮಜಾ ಬೇಕು” ಎಂದು ಹೇಳಿದ್ದಾರೆ ಎನ್ನಲಾಗಿದೆ. ಸ್ವಾಮೀಜಿಯ ಈ ಮಾತುಗಳನ್ನು ಮಹಿಳೆ ಮೊಬೈಲ್‌ನಲ್ಲಿ ಆಡಿಯೋ ಹಾಗೂ ವಿಡಿಯೋ ರೂಪದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

ಸ್ವಾಮೀಜಿ ನಿರಂತರವಾಗಿ ಫೋನ್ ಕರೆ, ಆಡಿಯೋ ಮೆಸೇಜ್ ಹಾಗೂ ವಿಡಿಯೋ ಕಾಲ್ ಮಾಡಿ ಕಿರುಕುಳ ನೀಡಿದ್ದಾರೆ. ಅಲ್ಲದೇ ಒಂಟಿಯಾಗಿದ್ದ ವೇಳೆ ಮನೆಗೆ ಬಂದು ಕಿರುಕುಳ ನೀಡಿದ್ದಾರೆ. ಆಡಿಯೋ-ವಿಡಿಯೋಗಳನ್ನು ಡಿಲೀಟ್ ಮಾಡುವಂತೆ ಒತ್ತಡ ಹೇರಿದ್ದು, ಅದಕ್ಕಾಗಿ 50 ಸಾವಿರ ರೂ. ನೀಡುವ ಆಮಿಷವನ್ನೂ ಒಡ್ಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಈ ಎಲ್ಲ ಘಟನೆಗಳು ಪತಿಗೆ ಗೊತ್ತಾಗಿ ಆತ ತನ್ನನ್ನು ಬಿಟ್ಟು ಹೋಗಿದ್ದಾನೆ ಎಂದೂ ಮಹಿಳೆ ಅಲವತ್ತುಕೊಂಡಿದ್ದಾರೆ. ಸಂತ್ರಸ್ತೆಯು ಈಗಾಗಲೇ ಪೊಲೀಸ್ ಠಾಣೆಗೆ ಆಡಿಯೋ-ವಿಡಿಯೋ ಸಾಕ್ಷ್ಯಗಳೊಂದಿಗೆ ದೂರು ನೀಡಿದ್ದಾರೆ. ಆದರೆ ನ್ಯಾಯ ಸಿಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

 

Related Articles

Back to top button
error: Content is protected !!