ಶಿಕ್ಷಣ

ಕೋಟೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಗಾರ 

Views: 82

ಕನ್ನಡ ಕರಾವಳಿ ಸುದ್ದಿ: ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಕೋಟೇಶ್ವರ ಇಲ್ಲಿ ವ್ಯವಹಾರ ಕ್ಷೇತ್ರದಲ್ಲಿ ಕಾನೂನು ಎಂಬ ವಿಷಯದಲ್ಲಿ ಒಂದು ದಿನದ ಕಾರ್ಯಾಗಾರ ನಡೆಯಿತು.

ಶ್ರೀ ಮಂಜುನಾಥ ಗಿಳಿಯಾರ್ ನ್ಯಾಯವಾದಿಗಳು ಕುಂದಾಪುರ ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ತರಬೇತಿ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಿಗೆ ವ್ಯವಹಾರ ಕ್ಷೇತ್ರದಲ್ಲಿ ಕಾನೂನ ಬಳಕೆಯ ಬಗ್ಗೆ ಅರಿವು ನೀಡಲಾಯಿತು.  ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಮಂಜುನಾಥ ಗಿಳಿಯಾರ್ ಮಾತನಾಡುತ್ತಾ, ಪ್ರತಿಯೊಬ್ಬ ನಾಗರಿಕರಿಗೂ ಕಾನೂನಿನ ಅರಿವಿನ ಅಗತ್ಯ ಇದೆ. ಕಾನೂನನ್ನ ಅರಿತುಕೊಂಡು ಅದನ್ನು ಗೌರವಿಸಿ ಜೀವನ ನಡೆಸಿದಾಗ ಚಿಂತೆ ಮುಕ್ತ ಜೀವನ ನಮ್ಮದಾಗುತ್ತದೆ. ಪ್ರತಿಯೊಂದು ಕಾನೂನು ನಮಗೆ ಜವಾಬ್ದಾರಿ ಮತ್ತು ಹಕ್ಕುಗಳನ್ನು ನೀಡುತ್ತದೆ. ಕಾನೂನು ನಮ್ಮ ದೈನಂದಿನ ಜೀವನ ಹಾಗೂ ಸಾಮಾಜಿಕ ವ್ಯವಹಾರಿಕ ಬದುಕಿನಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ ವ್ಯವಹಾರ ಕ್ಷೇತ್ರದಲ್ಲಿ ಕಾನೂನನ್ನು ಸರಿಯಾಗಿ ಪಾಲಿಸಿದಾಗ ಮಾತ್ರ ಉದ್ಯಮವು ನಿರೀಕ್ಷಿತ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಮರಾಯ ಆಚಾರ್ಯ ಮಾತನಾಡಿ, ಇಂದು ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ನೀಡುವ ಸಲುವಾಗಿ ಇಂತಹ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳು ಕಾನೂನು ಅರಿವನ್ನು ಪಡೆದುಕೊಂಡು ಅದನ್ನು ಜೀವನದಲ್ಲಿ ಸೂಕ್ತ ರೀತಿಯಲ್ಲಿ ಅಳವಡಿಸಿಕೊಂಡು ಜವಾಬ್ದಾರಿಯುತ ನಾಗರಿಕರಾಗಿ ಸಮಾಜದಲ್ಲಿ ಗೌರವದಿಂದ ಜೀವನ ನಡೆಸುವಂತಾಗಬೇಕು ಎಂದರು.

ಕಾಲೇಜಿನ ಐ ಕ್ಯೂ ಎ ಸಿ ಸಂಚಾಲಕ ಪ್ರೊ. ನಾಗರಾಜ ಯು, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ನಾಗರಾಜ ವೈದ್ಯ ಎಂ., ವಾಣಿಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಶೇಖರ ಬಿ, ಹಾಗೂ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಕಾರ್ತಿಕ್ ಪೈ, ಗ್ರಂಥಪಾಲಕರಾದ ರವಿಚಂದ್ರ ಹೆಚ್.ಎಸ್, ಹಾಗೂ ಉಪನ್ಯಾಸಕರಾದ ಉಜ್ವಲ ಶೆಟ್ಟಿ, ಸಾವಿತ್ರಿ, ಪಲ್ಲವಿ ಉಪಸ್ಥಿತರಿದ್ದರು. ಕಾಲೇಜಿನ ಸ್ನಾತಕೋತ್ತರ ವಿಭಾಗದ ಸಂಚಾಲಕ ಡಾ. ಉದಯ ಶೆಟ್ಟಿ. ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ನಿಶಾ ಸ್ವಾಗತಿಸಿದರು. ಕುಮಾರಿ ನಿಕಿತ ಕಾರ್ಯಕ್ರಮ ನಿರೂಪಿಸಿದರು. ಅನುಷಾ ವಂದಿಸಿದರು.

Related Articles

Back to top button
error: Content is protected !!