ಬ್ರಹ್ಮಾವರ: ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನ ನ್ಯಾಯಾಂಗ ಬಂಧನ

Views: 166
ಕನ್ನಡ ಕರಾವಳಿ ಸುದ್ದಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬ್ರಹ್ಮಾವರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇದೀಗ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಉಡುಪಿಯ ಬಿಜೆಪಿ ನಾಯಕ ರಾಜೀವ ಕುಲಾಲ್ ಪೊಲೀಸರಿಗೆ ದೂರು ನೀಡಿದ್ದರು. 2 ಬಾರಿ ನೋಟಿಸ್ ನೀಡಿದರೂ ಉತ್ತರಿಸಿದ ಕಾರಣ ಅವರನ್ನು ಗುರುವಾರ (ಆಗಸ್ಟ್ 21) ಉಜಿರೆಯಿಂದ ವಶಕ್ಕೆ ಪಡೆಯಲಾಗಿತ್ತು.
ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ವಶಕ್ಕೆ ಪಡೆಯಲು ಪೊಲೀಸರು ತೆರಳಿದ ಸಮಯದಲ್ಲಿ ಅವರ ಉಜಿರೆಯ ನಿವಾಸದ ಬಳಿ ಹೈಡ್ರಾಮಾ ನಡೆಯಿತು. ಕೊನೆಗೆ ತಿಮರೋಡಿ ಪೊಲೀಸ್ ವಾಹನದಲ್ಲಿ ತೆರಳದೆ ತಮ್ಮ ವಾಹನದಲ್ಲಿ ಬ್ರಹ್ಮಾವರಕ್ಕೆ ಪ್ರಯಾಣಿಸಿದರು.
ನಿಷೇಧಾಜ್ಞೆ ಜಾರಿ
ಕಾನೂನು ಸುವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯ ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ 2023ರ ಕಲಂ 163ರ ಅನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಇದು ಆಗಸ್ಟ್ 21r ಮಧ್ಯಾಹ್ನ 1 ಗಂಟೆಯಿಂದ 22ರ ಮಧ್ಯಾಹ್ನ 1 ಗಂಟೆವರೆಗೆ ಜಾರಿಯಲ್ಲಿರಲಿದೆ.
ಏನಿದು ಪ್ರಕರಣ?
ಆಗಸ್ಟ್ 16ರಂದು ಫೇಸ್‌ಬುಕ್ ಪೇಜ್‌ನಲ್ಲಿ ಮಹೇಶ ಶೆಟ್ಟಿ ತಿಮರೋಡಿಯು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿ ಉಡುಪಿ ಗ್ರಾಮಾಂತರ ಬಿಜೆಪಿಯ ಮಂಡಲಾಧ್ಯಕ್ಷ ರಾಜೀವ ಕುಲಾಲ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ತಿಳಿದುಬಂದಿದೆ.