ಅಸೋಡು, ಕಕ್ಕೇರಿ, ಹೂವಿನಕೆರೆ, ಕುರುವಾಡಿ, ಚಾರು ಕೊಟ್ಟಿಗೆ ಪರಿಸರದಲ್ಲಿ ರಾತ್ರಿ ಹಗಲೆನ್ನದೆ ಮತ್ತೆ ಚಿರತೆ ಸಂಚಾರ: ಭಯಭೀತಾದ ಜನರು

Views: 348
ಕನ್ನಡ ಕರಾವಳಿ ಸುದ್ದಿ: ಅಸೋಡು ಹಾಗೂ ಕಕ್ಕೇರಿ ಪರಿಸರದಲ್ಲಿ ಚಿರತೆ ಸಂಚರಿಸಿರುವುದು ಆ ಭಾಗದ ನಿವಾಸಿಗಳಲ್ಲಿ ಆತಂಕ ಉಂಟುಮಾಡಿದೆ. ಅಸೋಡಿನ ತೆಂಗಿನಕಾಯಿ ಫ್ಯಾಕ್ಟರಿ ಸಂಪರ್ಕ ರಸ್ತೆ ಬಳಿ ಆ. 19 ರ ರಾತ್ರಿ 7 ಗಂಟೆಗೆ ಆ ಮಾರ್ಗವಾಗಿ ಸಾಗುತ್ತಿರುವ ವ್ಯಕ್ತಿಯೋರ್ವರು ಕಂಡು ಭಯಭೀತರಾಗಿ ಆಸುಪಾಸಿನ ಜನರಿಗೆ ಮಾಹಿತಿ ನೀಡಿದರು.
ಇಲ್ಲಿನ ಕಕ್ಕೇರಿ ನಿವಾಸಿ ಚಂದ್ರಶೇಖರ ನಾವಡ ಅವರ ಮನೆಯ ಹಾಡಿಯಲ್ಲಿ ಹಗಲು ಹೊತ್ತಿನಲ್ಲಿ ಚಿರತೆ ಸಂಚರಿಸುವುದನ್ನು ಅವರು ಕಂಡಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಪಂದಿಸಿದ ಇಲಾಖೆ ಆ ಭಾಗದಲ್ಲಿ ಚಿರತೆ ಹಿಡಿಯಲು ಬೋನ್ ವ್ಯವಸ್ಥೆ ಮಾಡಲಾಗಿದೆ.
ಅಸೋಡು, ಕಿಕ್ಕೇರಿ, ಹೂವಿನಕೆರೆ, ಕುರುವಾಡಿ, ಚಾರು ಕೊಟ್ಟಿಗೆ ಪರಿಸರದಲ್ಲಿ ರಾತ್ರಿ ಹಗಲೆನ್ನದೆ ಚಿರತೆ ಸಂಚರಿಸುತ್ತಿದ್ದು ಇಲ್ಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಗುಡ್ಡ ಹಾಗೂ ಮರ-ಗಿಡಗಳು ಬೆಳೆದಿರುವ ಹೂವಿನಕೆರೆ ರೈಲ್ವೆ ಬ್ರಿಡ್ಜ್, ಕುರುವಾಡಿ ಪರಿಸರದಲ್ಲಿ ಚಿರತೆ ವಾಸವಾಗಿದ್ದು ರಾತ್ರಿ ಆಗುತ್ತಿದ್ದಂತೆ ಗ್ರಾಮದ ಮನೆಗಳಿಗೆ ಪ್ರವೇಶಿಸಿ ಸಾಕು ಪ್ರಾಣಿಗಳಾದ ನಾಯಿ, ದನ ಕರುಗಳು ಮತ್ತು ಕೋಳಿಗಳ ಮೇಲೆ ದಾಳಿ ಮಾಡಿ ಹೊತ್ತುಕೊಂಡು ಹೋಗಿವೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಕಳೆದ ಆರು ತಿಂಗಳಿಂದ ಎರಡು ಚಿರತೆಗಳು ಕಾಣಿಸಿಕೊಂಡಿವೆ.ಇತ್ತೀಚಿಗೆ ಪದೇ ಪದೆ ಚಿರತೆ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ.
ಇಲ್ಲಿನ ರೈತರು ತಮ್ಮ ಜಮೀನಿಗೆ ಹೋಗಲು ಭಯ ಪಡುತ್ತಿದ್ದಾರೆ.ಕೂಲಿ ಕಾರ್ಮಿಕರು ಶಾಲಾ ಮಕ್ಕಳು ಭಯದಲ್ಲಿಯೇ ತಿರುಗಾಡುವ ಸ್ಥಿತಿ ಬಂದಿದೆ.
ಇತ್ತೀಚೆಗೆ ಅಸೋಡು ವನಜ ಶೇರೆಗಾರ್ತಿ ಮನೆಯ ಸಿಟೌಟ್ ನಲ್ಲಿ ರಾತ್ರಿ ಹೊತ್ತಿಗೆ ಮನೆಯ ಸುತ್ತಮುತ್ತ ಚಿರತೆ ತಿರುಗಾಡಿದ್ದು, ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸರೆಯಾಗಿದೆ.
ಚಿರತೆ ಕಾಟಕ್ಕೆ ನಲುಗಿರುವ ಜನರು ಭಯದಿಂದ ತಿರುಗಾಡುವ ಸ್ಥಿತಿ ನಿರ್ಮಾಣವಾಗಿದೆ. ಚಿರತೆ ಹಾವಳಿಯಿಂದ ಮುಕ್ತಿ ನೀಡಬೇಕೆಂದು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.