ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್: ಶಿಕ್ಷಕ-ರಕ್ಷಕರ ಸಭೆ

Views: 50
ಕನ್ನಡ ಕರಾವಳಿ ಸುದ್ದಿ: ಮದರ್ ತೆರೆಸಾ ಮೆಮೋರಿಯಲ್ ಸ್ಕೂಲ್ ಶಂಕರ ನಾರಾಯಣದಲ್ಲಿ ಕ್ರಮವಾಗಿ ಕಿರಿಯ ಪ್ರಾಥಮಿಕ ವಿಭಾಗದಿಂದ ಹಿಡಿದು ಪದವಿ ಪೂರ್ವ ವಿಭಾಗಗಳ ವರೆಗೆ ವಿದ್ಯಾರ್ಥಿಗಳ ಹೆತ್ತವರ ಸಭೆಯನ್ನು ಅಗಸ್ಟ್ 14 ರಿಂದ 19ರವರೆಗೆ ಕರೆಯಲಾಯಿತು.
ಆಡಳಿತ ನಿರ್ದೇಶಕರು ಪೋಷಕರೊಂದಿಗೆ ಸೇರಿ ಸಭೆಯನ್ನು ಉದ್ಘಾಟಿಸಿದರು.ಪ್ರೌಢಶಾಲಾ ವಿಭಾಗದಲ್ಲಿ ಸಂಯೋಜಕರಾದ ಶ್ರೀಯುತ ಸುಧೀರ ಪೂಜಾರಿ ಹಾಗೂ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಶ್ರೀಮತಿ ಅಕ್ಷತಾ ಇವರು ಸರ್ವರನ್ನು ಸ್ವಾಗತಿಸಿ, ಶಿಕ್ಷಕರ ಕಿರು ಪರಿಚಯವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಹಾಯಕ ಮುಖ್ಯೋಪಾಧ್ಯಾಯರಾದ ಶ್ರೀಯುತ ಸಂತೋಷ್ ಕುಮಾರ್ ಶೆಟ್ಟಿ ಅವರು ‘ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ‘ಎಂಬ ವಿಷಯದ ಕುರಿತು ಮಾಹಿತಿಯನ್ನು ನೀಡಿದರು.
ಆಡಳಿತ ನಿರ್ದೇಶಕರಾದ ಕುಮಾರಿ ರೆನಿಟೋ ಲೋಬೊ ಇವರು ಮಾತನಾಡಿ, ಮೊಬೈಲ್ ನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು ಹಾಗೂ ಮಕ್ಕಳಲ್ಲಿ ಆಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಗುರುತಿಸಿ ಅವರಿಗೆ ಸರಿಯಾದ ಮಾರ್ಗದರ್ಶನವನ್ನು ನೀಡುವುದು ಪೋಷಕರ ಆದ್ಯ ಕರ್ತವ್ಯ ಎನ್ನುವುದನ್ನು ಮನಮುಟ್ಟುವಂತೆ ತಿಳಿಸಿದರು.
ನಂತರ ಇನ್ನೋರ್ವ ಆಡಳಿತ ನಿರ್ದೇಶಕರಾದ ಕುಮಾರಿ ಶಮಿತಾ ರಾವ್ ಇವರು ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಕನಸಿಗೆ ಪ್ರೋತ್ಸಾಹದ ನೀರೆರೆಯುವುದು ಪೋಷಕರ ಕರ್ತವ್ಯ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದರು. ಪ್ರೌಢಶಾಲಾ ವಿಭಾಗದ ಹೆತ್ತವರ ಸಭೆಯಲ್ಲಿ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ಶ್ರೀಯುತ ಜೇಸನ್ ಲೂಯಿಸ್ ಹಾಗೂ ಉಪ ಪ್ರಾಂಶುಪಾಲರಾದ ಕುಮಾರಿ ಗೀತಾ ಪದವಿ ಪೂರ್ವ ವಿಭಾಗದ ಹೊಸ ಕಾರ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ತರುವಾಯ ಪೋಷಕರು ಶಿಕ್ಷಕರು ಮತ್ತು ಶಾಲೆಯ ಆಡಳಿತ ಮಂಡಳಿಯೊಂದಿಗೆ ನೇರವಾಗಿ ಚರ್ಚೆ ನಡೆಸಿ ತಮ್ಮ ಮಕ್ಕಳ ಶೈಕ್ಷಣಿಕ ಬೆಳವಣಿಗೆ ಹಾಗೂ ಶಾಲಾ ಕಾರ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು.ಅದೇ ರೀತಿ ಪದವಿ ಪೂರ್ವ ವಿಭಾಗದ ಸಭೆಯಲ್ಲಿ ಎಲ್ಲಾ ಪೋಷಕರು ಆಯಾ ವಿಷಯದ ಉಪನ್ಯಾಸಕರನ್ನು ಭೇಟಿಯಾಗಿ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಚರ್ಚಿಸಿ ಅದರಲ್ಲಾದ ಗುಣಾತ್ಮಕ ಬದಲಾವಣೆಯನ್ನು ಕಂಡು ಸಂತೃಪ್ತಿಯಿಂದ ಸಂತೋಷವನ್ನು ವ್ಯಕ್ತಪಡಿಸಿದರು.
ತನ್ಮೂಲಕ ಸಮನ್ವಯ ಎಂಬ ಶೀರ್ಷಿಕೆಯಡಿಯಲ್ಲಿ ಆರಂಭವಾದ ಶಿಕ್ಷಕರ ಮತ್ತು ಹೆತ್ತವರ ಮುಕ್ತ ಚರ್ಚೆಯು ಅರ್ಥಪೂರ್ಣವಾಗಿ ಮುಕ್ತಾಯಗೊಂಡಿತು. ಈ ಸಂವಾದವು ಶಾಲೆ ಮತ್ತು ಪೋಷಕರ ನಡುವೆ ಪರಸ್ಪರ ವಿಶ್ವಾಸ ಮತ್ತು ಸಹಕಾರದ ನಂಟನ್ನು ಮತ್ತಷ್ಟು ಬಲಪಡಿಸಿತು. ಮುಂದಿನ ದಿನಗಳಲ್ಲಿ ಶಾಲೆಯ ಗುಣಮಟ್ಟವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಈ ಸಭೆ ಪ್ರೇರಕವಾಯಿತು.