ಉತ್ತರ ಪ್ರದೇಶ, ಬಿಹಾರದಲ್ಲಿ ಬಿಸಿಗಾಳಿಗೆ ತತ್ತರಿಸಿದ ಜನ: 98 ಸಾವು

Views: 0
ಉತ್ತರ ಭಾರತದಲ್ಲಿ ಬಿಸಿಲಿನ ಝಳ ಜಾಸ್ತಿಯಾಗಿದ್ದು, ತಾಪಮಾನ ದಿನೇ ದಿನೆ ಜಾಸ್ತಿಯಾಗಿ ಜನರು ತತ್ತರಿಸಿದ್ದಾರೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕೇವಲ 72 ಗಂಟೆಗಳ ಅವಧಿಯಲ್ಲಿ 98 ಮಂದಿ ಅಸು ನೀಗಿದ್ದಾರೆ .
ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯ ಆಸ್ಪತ್ರೆಗೆ ದಾಖಲಾಗಿದ್ದ 54 ಮಂದಿ, ಬಿಹಾರದಲ್ಲಿ 44 ಮಂದಿ ವಿಪರೀತ ತಾಪಮಾನ ತಾಳಲಾರದೆ ಸಾವನಪ್ಪಿದ್ದಾರೆ.
400ಕ್ಕೂ ಹೆಚ್ಚು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ ಬಿಸಿ ಗಾಳಿಯಿಂದ ಉಂಟಾದ ಜ್ವರ, ಉಸಿರಾಟದ ತೊಂದರೆ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಅಧಿಕಾರಿಗಳ ತಂಡ ಇಲ್ಲಿಗೆ ಭೇಟಿ ನೀಡಿದ್ದು, ಮೆದುಳಿನ ಪಾರ್ಶುವಾಯು ಹಾಗೂ ಅತಿಸಾರವೇ ಕಾರಣ ಎಂದು ತಿಳಿದುಬಂದಿದೆ. ಹೆಚ್ಚಿನವರು 60 ವರ್ಷ ದಾಟಿದವರೇ ಆಗಿದ್ದಾರೆ.
ಹಿರಿಯ ವೈದ್ಯಾಧಿಕಾರಿ ವಿ.ಕೆ.ಸಿಂಗ್ ಮಾತಾಡಿ, ಸಾವಿನ ಪ್ರಕರಣಗಳಿಗೆ ಬಿಸಿ ಗಾಳಿಯೇ ಕಾರಣವಲ್ಲ. ನೀರಿನಿಂದಾಗಿ ಇಂತಹ ಘಟನೆಗಳು ಸಂಭವಿಸಿರಬಹುದು ಎಂದು ಹೇಳಿದ್ದಾರೆ.ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಬಿಹಾರದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದು, ಬಿಸಿಲಿನ ತಾಪಮಾನದಿಂದ ಮನೆಯಿಂದ ಹೊರಗೆ ಕಾಲಿಡಲು ಕಷ್ಟ ಸಾಧ್ಯ ಜಿಲ್ಲಾಡಳಿತವು ಬೇಸಿಗೆಯ ರಜೆಯನ್ನು ಜೂನ್ 24ರ ವರೆಗೆ ವಿಸ್ತರಿಸಿದ್ದಾರೆ. ಬಿಸಿಲಿನ ಝಳಕಕ್ಕೆ ರೈಲು ನಿಲ್ದಾಣದ ಲೂಪ್ ಲೈನ್ ನಲ್ಲಿದ್ದ ಹಳಿಯೇ ಮೆಲ್ಟ್ ಆಗಿದೆ.







