ಮಂಗಳೂರು: ಚಿನ್ನದ ವ್ಯಾಪಾರಿಯೊಬ್ಬರ ಕುಟುಂಬವನ್ನು ಅಡ್ಡಗಟ್ಟಿ 20 ಲಕ್ಷ ರೂ.ಹೆಚ್ಚು ದರೋಡೆ
Views: 101
ಕನ್ನಡ ಕರಾವಳಿ ಸುದ್ದಿ :ನಗರದ ಬೈಕಂಪಾಡಿ ಹೆದ್ದಾರಿಯಲ್ಲಿ ಮಹಾರಾಷ್ಟ್ರದ ಚಿನ್ನದ ವ್ಯಾಪಾರಿಯೊಬ್ಬರನ್ನು ಅಡ್ಡಗಟ್ಟಿದ ದರೋಡೆಕೋರರ ತಂಡವೊಂದು, ಕಾರು ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಇಂದು (ಸೋಮವಾರ) ಮುಂಜಾನೆ ನಡೆದಿದೆ.
ಮಹಾರಾಷ್ಟ್ರದ ಸಾಂಗ್ಲಿಯ ನಿವಾಸಿ ಚಿನ್ನದ ವರ್ತಕ ವಿಕಾಸ್ ಎಂಬುವರೇ ದರೋಡೆಗೊಳಗಾದವರು. ಮುಂಬೈ ಸಮೀಪದ ಸಾಂಗ್ಲಿಯಲ್ಲಿ ಪರಿಚಯಸ್ಥರ ಮದುವೆ ಮುಗಿಸಿ ಕುಟುಂಬ ಸಮೇತ ಕೇರಳದ ಪಯ್ಯನ್ನೂರಿಗೆ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಸೋಮವಾರ ನಸುಕಿನ ಜಾವ ಸುಮಾರು 2:15 ಗಂಟೆಯ ವೇಳೆಗೆ ವಿಕಾಸ್ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದ ದರೋಡೆಕೋರರು ಬೈಕಂಪಾಡಿ ಬಳಿ ಅಡ್ಡಗಟ್ಟಿದ್ದಾರೆ. ಇನೋವಾ ಕಾರಿನಲ್ಲಿ ಬಂದಿದ್ದ ಸುಮಾರು 7 ಮಂದಿಯಿದ್ದ ಖದೀಮರ ತಂಡ, ವಿಕಾಸ್ ಅವರನ್ನು ಬಲವಂತವಾಗಿ ಕಾರಿನಿಂದ ಕೆಳಗಿಳಿಸಿದೆ.
ಬೈಕಂಪಾಡಿಯಲ್ಲೇ ವಿಕಾಸ್ ಅವರನ್ನು ಬಿಟ್ಟು, ಅವರ ಪತ್ನಿ ಮತ್ತು ಮಗನಿದ್ದ ಸ್ವಿಫ್ಟ್ ಕಾರನ್ನೇ ಅಪಹರಿಸಿದ ದರೋಡೆಕೋರರು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ಸ್ವಲ್ಪ ದೂರದ ಕುಳೂರು ಎಂಬಲ್ಲಿಗೆ ತಲುಪುತ್ತಿದ್ದಂತೆ ಪತ್ನಿ ಮತ್ತು ಮಗನನ್ನು ಕಾರಿನಿಂದ ಕೆಳಗಿಳಿಸಿ, ಕಾರಿನೊಂದಿಗೆ ಜಾಗ ಖಾಲಿ ಮಾಡಿದ್ದಾರೆ.
ಕಾರಿನಲ್ಲಿದ್ದ ಸುಮಾರು 180 ಗ್ರಾಂ ಚಿನ್ನದ ಆಭರಣಗಳು, ನಗದು ಸೇರಿದಂತೆ ಒಟ್ಟು 20 ಲಕ್ಷ ರೂಪಾಯಿ ಮೌಲ್ಯದ ಸೊತ್ತನ್ನು ದರೋಡೆಕೋರರು ಲೂಟಿ ಮಾಡಿದ್ದಾರೆ ಎಂದು ಸಂತ್ರಸ್ತ ವಿಕಾಸ್ ಸುರತ್ಕಲ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.






