ಮತ್ತೆ ಮುನ್ನೆಲೆಗೆ ಬಂದ ಸಿಎಂ ಬದಲಾವಣೆ ಕೂಗು!

Views: 75
ಕನ್ನಡ ಕರಾವಳಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ದೆಹಲಿ ಭೇಟಿಯ ಬೆನ್ನಲ್ಲೇ ರಾಜ್ಯದಲ್ಲಿ ಐದು ವರ್ಷ ಸಿದ್ದರಾಮಯ್ಯ ಸಿಎಂ ಎನ್ನುವ ಕೂಗು ಶುರುವಾಗಿದೆ.
ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೆಲ ಸಚಿವರು, ಶಾಸಕರು ಈ ಹೇಳಿಕೆಯನ್ನು ಮುನ್ನೆಲೆಗೆ ತರುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಿಎಂ ಕುರ್ಚಿ ಯಾವತ್ತೂ ಅಲ್ಲಾಡಿಲ್ಲ. ಸಿಎಂ ಕುರ್ಚಿ, ಕುರ್ಚಿಯ ಮೇಲೆ ಕುಳಿತವರು ಎರಡು ಬಿಗಿಯಾಗಿದೆ. ಮುಂದಿನ ಎರಡೂವರೆ ವರ್ಷ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದರು.
ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗಿದ್ದ ವಿಚಾರದ ಕುರಿತು ಪ್ರತಿಕ್ರಿಯಿಸಿ, ಜಾತಿ ಗಣತಿ ವಿಚಾರ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾತನಾಡಲು ದೆಹಲಿಗೆ ಹೋಗಿದ್ದರು. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಪ್ರಮುಖವಾಗಿ ಜಾತಿ ಗಣತಿಯ ವಿಚಾರದ ಬಗ್ಗೆ ಸಿಎಂ ಚರ್ಚೆ ಮಾಡಿದ್ದಾರೆ. ಗುರುವಾರ ಜಾತಿಗಣತಿಯ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ ಎಂದರು.ಯಾರೂ ಸಿಎಂ ಬದಲಾವಣೆಗೆ ಗಡುವು ಕೊಟ್ಟಿಲ್ಲ.
ನವೆಂಬರ್ನಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ, ಈಗ ಸಿಎಂ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಐದು ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿ ಇರುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು. ಜಿಪಂ ಕಚೇರಿ ಬಳಿ ನವೆಂಬರ್ನಲ್ಲಿ ಮುಖ್ಯಮಂತ್ರಿ ಬದಲಾವಣೆ ಯಾಗುತ್ತಾರೆಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ದೆಹಲಿಗೆ ಸಿಎಂ, ಡಿಸಿಎಂ ಹೋಗಿರುವುದು ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡಲು, ಮುಖ್ಯವಾಗಿ ಜಾತಿ ಗಣತಿ ಬಗ್ಗೆ ಚರ್ಚೆಯಾಗಿದೆ ಎಂದರು.