ಟ್ಯೂಷನ್ ಹೇಳಿಕೊಡುತ್ತಿದ್ದ ಶಿಕ್ಷಕ 10ನೇ ತರಗತಿ ವಿದ್ಯಾರ್ಥಿನಿ ಕಿಡ್ನ್ಯಾಪ್!

Views: 226
ಕನ್ನಡ ಕರಾವಳಿ ಸುದ್ದಿ: ಟ್ಯೂಷನ್ ಹೇಳಿಕೊಡುತ್ತಿದ್ದ ಶಿಕ್ಷಕ 10ನೇ ತರಗತಿ ವಿದ್ಯಾರ್ಥಿನಿಯನ್ನು ಕಿಡ್ನ್ಯಾಪ್ ಮಾಡಿರುವ ಘಟನೆ ಬೆಂಗಳೂರಿನ ಜೆ.ಪಿನಗರದಲ್ಲಿ ನಡೆದಿದೆ.
ಟ್ಯೂಷನ್ ಟೀಚರ್ ಅಭಿಷೇಕ್ ಎಂಬಾತ 10ನೇ ತರಗತಿ ವಿದ್ಯಾರ್ಥಿನಿಯನ್ನು ಪ್ರೀತಿ-ಪ್ರೇಮ ಎಂದು ನಂಬಿಸಿ ಕಿಡ್ನ್ಯಾಪ್ ಮಾಡಿದ್ದು, ಕಳೆದ 40 ದಿನಗಳಿಂದ ಆರೋಪಿ ಹಾಗೂ ವಿದ್ಯಾರ್ಥಿನಿ ಇಬ್ಬರೂ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ವಿದ್ಯಾರ್ಥಿನಿ ತಂದೆ ಬೆಂಗಳೂರಿನ ಜೆ.ಪಿ,ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನವೆಂಬರ್ 23ರಂದು ವಿದ್ಯಾರ್ಥಿನಿ ಎಂದಿನಂತೆ ಟ್ಯೂಷನ್ ಗೆ ಹೋಗಿದ್ದಾಳೆ. ಟ್ಯೂಷನ್ ಕ್ಲಾಸ್ ಮುಗಿದು ರಾತ್ರಿಯಾದರೂ ವಿದ್ಯಾರ್ಥಿನಿ ಮನೆಗೆ ಬಂದಿಲ್ಲ. ಆತಂಕಕ್ಕೀಡಾದ ಪೋಷಕರು, ಟ್ಯೂಷನ್ ಸೆಂಟರ್ ಬಳಿ ಹೋಗಿ ನೋಡಿದ್ದಾರೆ. ಈ ವೇಳೆ ಶಿಕ್ಷಕ ಅಭಿಷೇಕ್ ವಿದ್ಯಾರ್ಥಿನಿಯನ್ನು ಕರೆದೊಯ್ದಿದ್ದಾಗಿ ಗೊತ್ತಾಗಿದೆ.
ಅಲ್ಲದೇ ಆರೋಪಿ ಶಿಕ್ಷಕ ತನ್ನ ಮನೆ ರೂಂನಲ್ಲಿಯೇ ಮೊಬೈಲ್ ಬಿಟ್ಟು ಹೋಗಿದ್ದಾನೆ. ವಿದ್ಯಾರ್ಥಿನಿಯೊಂದಿಗೆ ತಲೆಮರೆಸಿಕೊಂಡಿದ್ದಾನೆ.
ಈಗಾಗಲೇ ಪೊಲೀಸರು ವಿವಿಧೆಡೆ ಹುಡುಕಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯನ್ನು ಅಪಹರಿಸಿರುವ ಆರೋಪಿ ಶಿಕ್ಷಕನ ಬಗ್ಗೆ ಸುಳಿವು ನೀಡಿದರೆ ಬಹುಮಾನ ನೀಡುವುದಾಗಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.






