ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ತಾಯಿ ಆತ್ಮಹತ್ಯೆ

Views: 203
ಕನ್ನಡ ಕರಾವಳಿ ಸುದ್ದಿ : ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕುಸುಮಾ (35) ಎಂಬ ಮಹಿಳೆ 6 ವರ್ಷದ ಮಗ ಹಾಗೂ 7 ವರ್ಷದ ಮಗಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ. ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ತುಮಕೂರು ಜಿಲ್ಲೆಯ ಮಧುಗಿರಿಯ ಸುರೇಶ್ (40) ಅವರು ಯಶವಂತಪುರ ನಿವಾಸಿ ಕುಸುಮಾ ಅವರನ್ನು 2015ರಲ್ಲಿ ವಿವಾಹ ಆಗಿದ್ದರು. ದಂಪತಿ ಬಾಲಾಜಿ ಲೇಔಟ್ನ ಫ್ಲ್ಯಾಟ್ನಲ್ಲಿ ನೆಲಸಿದ್ದರು. ಸುರೇಶ್ ಅವರು ವೈಟ್ಫೀಲ್ಡ್ನ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಚಿಕ್ಕ ಮಕ್ಕಳಿದ್ದ ಕಾರಣಕ್ಕೆ ಕುಸುಮಾ ಅವರು ಕೆಲವು ತಿಂಗಳಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ’ ಎಂದು ಮೂಲಗಳು ಹೇಳಿವೆ.
ಸ್ಥಳದಲ್ಲಿ ದೊರೆತ ಮರಣ ಪತ್ರದಲ್ಲಿ ಏನಿದೆ?
ಘಟನಾ ಸ್ಥಳದಲ್ಲಿ ಮರಣ ಪತ್ರ ದೊರೆತಿದೆ. ಅದನ್ನು ವಶಕ್ಕೆ ಪಡೆದುಕೊಂಡು ಪರಿಶೀಲಿಸಲಾಗುತ್ತಿದೆ. ‘ನಮ್ಮ ಸಾವಿಗೆ ನಾವೇ ಕಾರಣ. ಅಭಿನಂದನೆಗಳು… ವಿನ್ ಯುವರ್ ಈಗೋ… ಜೀವನ ಪೂರ್ತಿ ಇದು ನೆನಪಿನಲ್ಲಿ ಇರಬೇಕು’ ಎಂದು ಆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮರಣ ಪತ್ರದ ನೈಜತೆ ಪರಿಶೀಲನೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್ಎಸ್ಎಲ್) ಕಳುಹಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಕುಸುಮಾ ಅವರ ಸಹೋದರ ದೂರು ನೀಡಿದ್ದು, ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಸುರೇಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ವರದಿ ಬಂದ ಬಳಿಕ ಮಕ್ಕಳ ಸಾವು ಹೇಗಾಯಿತು ಎಂಬುದು ಗೊತ್ತಾಗಲಿದೆ.
ಬುಧವಾರ ಬೆಳಿಗ್ಗೆ ಸುರೇಶ್ ಅವರು ಕೆಲಸಕ್ಕೆ ತೆರಳಿದ್ದರು. ಸಂಜೆ ಮನೆಗೆ ಬಂದು ನೋಡಿದಾಗ ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಸುರೇಶ್ ಅವರೇ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಕೌಟುಂಬಿಕ ಕಲಹವೇ ಕಾರಣ?: ಮದುವೆಯಾದ ಆರಂಭದಲ್ಲಿ ದಂಪತಿ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಕ್ರಮೇಣ ಭಿನ್ನಾಭಿಪ್ರಾಯ ಉಂಟಾಗಿತ್ತು ಎನ್ನಲಾಗಿದೆ. ಕೌಟುಂಬಿಕ ಕಲಹವೇ ಕೃತ್ಯಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.
ಎರಡು ದಿನಗಳ ಹಿಂದೆ ಗಲಾಟೆ: ಎರಡು ದಿನಗಳ ಹಿಂದೆ ದಂಪತಿ ಮಧ್ಯೆ ಗಲಾಟೆ ನಡೆದಿತ್ತು. ಗಲಾಟೆಯಿಂದ ಕುಸುಮಾ ಅವರು ನೊಂದುಕೊಂಡಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಮಕ್ಕಳನ್ನು ಕೊಲೆ ಮಾಡಿ, ಅವರೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






