ಕುಂದಾಪುರ: ಪ್ರಾಂಶುಪಾಲರಿಗೆ ನೀಡಿದ್ದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಡೆ

Views: 239
ಬೆಂಗಳೂರು: ಕುಂದಾಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಜಿ. ರಾಮಕೃಷ್ಣ ಅವರಿಗೆ ನೀಡಲಾಗಿದ್ದ ರಾಜ್ಯಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿಯನ್ನು ಶಾಲಾ ಶಿಕ್ಷಣ ಇಲಾಖೆ ತಡೆಹಿಡಿದಿದೆ.
ರಾಮಕೃಷ್ಣ ಸೇರಿದಂತೆ ರಾಜ್ಯದ ಪದವಿಪೂರ್ವ ಕಾಲೇಜುಗಳ ಇಬ್ಬರು ಪ್ರಾಂಶುಪಾಲರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದ ಶಾಲಾ ಶಿಕ್ಷಣ ಇಲಾಖೆ ಮಂಗಳವಾರ ರಾತ್ರಿ ಪಟ್ಟಿ ಬಿಡುಗಡೆ ಮಾಡಿತ್ತು.
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ನಡೆದಿದ್ದ ಉಡುಪಿ ಜಿಲ್ಲೆಯ ಹಿಜಾಬ್ ಪ್ರಕರಣದ ವೇಳೆ ವಿವಾದಕ್ಕೀಡಾಗಿದ್ದ ಪ್ರಾಂಶುಪಾಲರಿಗೆ ಪ್ರಶಸ್ತಿ ಪ್ರಕಟಿಸಿರುವ ಕಾಂಗ್ರೆಸ್ ಸರಕಾರದ ಈ ಆಯ್ಕೆ ವಿವಾದ ಸೃಷ್ಟಿಸಿದೆ. ಹಿಜಾಬ್ ಧರಿಸಿ ಬಂದಿದ್ದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರಾಗಿದ್ದ ರಾಮಕೃಷ್ಣ ಕಾಲೇಜು ಗೇಟ್ ಹೊರಗೆ ನಿಲ್ಲಿಸಿದ್ದರು. ಇದು ವಿವಾದದ ಸ್ವರೂಪ ಪಡೆದು, ಇತರೆ ಜಿಲ್ಲೆಗಳಿಗೂ ಹಬ್ಬಿತ್ತು. ಕೊನೆಗೆ ಬಿಜೆಪಿ ಸರ್ಕಾರ ಶಾಲಾ–ಕಾಲೇಜುಗಳ ಒಳಗೆ ಹಿಜಾಬ್ ಧರಿಸುವುದನ್ನು ನಿಷೇಧಿಸಿತ್ತು.
ವಿದ್ಯಾರ್ಥಿನಿಯರನ್ನು ಗೇಟ್ ನಲ್ಲಿಯೇ ತಡೆದು ಪ್ರವೇಶ ನಿರಾಕರಿಸಿದ್ದರು. ವಿದ್ಯಾರ್ಥಿನಿಯರನ್ನು ಗೇಟ್ನಿಂದ ಹೊರಗೆ ಕಳುಹಿಸಿ ಸ್ವತಃ ತಮ್ಮ ಕೈಯಾರೆ ಕಾಲೇಜು ಗೇಟ್ ಬಂದ್ ಮಾಡಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.
ಪ್ರಶಸ್ತಿ ಪಟ್ಟಿ ಪ್ರಕಟವಾದ ಬೆನ್ನಲ್ಲೇ ರಾಮಕೃಷ್ಣ ಅವರಿಗೆ ಪ್ರಶಸ್ತಿ ನೀಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ರಾಮಕೃಷ್ಣ ಅವರಿಗೆ ನೀಡಲಾಗಿದ್ದ ರಾಜ್ಯಮಟ್ಟದ ‘ಉತ್ತಮ ಶಿಕ್ಷಕ’ ಪ್ರಶಸ್ತಿಯನ್ನು ಶಾಲಾ ಶಿಕ್ಷಣ ಇಲಾಖೆ ತಡೆಹಿಡಿದಿದೆ.
ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರ 20 ಪ್ರಾಥಮಿಕ ಶಾಲಾ ಶಿಕ್ಷಕರು, 11 ಪ್ರೌಢಶಾಲಾ ಶಿಕ್ಷಕರು, ಎಂಟು ಪಿಯು ಉಪನ್ಯಾಸಕರು ಹಾಗೂ ಇಬ್ಬರು ಪ್ರಾಂಶುಪಾಲರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿತ್ತು. ಸೆ. 5ರಂದು ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಮಕೃಷ್ಣ ಅವರನ್ನು ಬಿಟ್ಟು ಉಳಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.






