ಇತರೆ

ಜಮ್ಮು ಕಾಶ್ಮೀರದಲ್ಲಿ 150 ಅಡಿ ಆಳದ ಕಣಿವೆಗೆ ಬಿದ್ದ ಯಾತ್ರಾರ್ಥಿಗಳಿದ್ದ ಬಸ್; 21 ಮಂದಿ ಸಾವು, ಹಲವರು ಗಂಭೀರ 

Views: 55

ಶ್ರೀನಗರ, ಜಮ್ಮು ಮತ್ತು ಕಾಶ್ಮೀರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಅಖ್ನೂರ್‌ನಲ್ಲಿ ವಾಹನವೊಂದು ಕಣಿವೆ ಬಿದ್ದು, 21 ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಪಘಾತದಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಮ್ಮು ಮತ್ತು ಪೂಂಛ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ. ಹರ್ಯಾಣದ ಕುರುಕ್ಷೇತ್ರದಿಂದ ಬರುತ್ತಿದ್ದ ಬಸ್ ಇಲ್ಲಿನ ಅಖ್ನೂರ್ ಎಂಬಲ್ಲಿ ತೆರಳುತ್ತಿದ್ದಾಗ, ಆಯತಪ್ಪಿ ಕಣಿವೆಗೆ ಬಿದ್ದಿದೆ. ಅಪಘಾತದ ವೇಳೆ ಬಸ್‌ನಲ್ಲಿ 80ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹರ್ಯಾಣದಿಂದ ಯಾತ್ರಾರ್ಥಿಗಳು ಶಿವಖೋರಿಗೆ ತೆರಳುತ್ತಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಬಸ್ 150 ಅಡಿ ಆಳದ ಕಣಿವೆಗೆ ಬಿದ್ದಿರುವುದು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದ್ದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ಶಂಕಿಸಲಾಗಿದೆ.

ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿ, ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

Related Articles

Back to top button
error: Content is protected !!