ಅದಾನಿ ಗ್ರೂಪ್ ಶೀಘ್ರದಲ್ಲಿಯೇ ಡಿಜಿಟಲ್ ಪಾವತಿ ರಂಗಕ್ಕೆ ಪ್ರವೇಶಿಸಲು ಯೋಜನೆ

Views: 27
ಬೆಂಗಳೂರು: ಗೂಗಲ್ ಪೇ, ಫೋನ್ ಪೇ, ಅಮೆಜಾನ್ ಪೇ ಹಾಗೂ ಇತರ ಪಾವತಿ ವ್ಯವಸ್ಥೆಗಳು ಭಾರತದಲ್ಲಿ ಯುಪಿಐ ಪಾವತಿ ವ್ಯವಸ್ಥೆಯ ಬಳಕೆಯನ್ನು ವ್ಯಾಪಕಗೊಳಿಸಿವೆ. ಜತೆಗೆ ಕ್ರೆಡಿಟ್ ಕಾರ್ಡ್ ಬಳಕೆಯೂ ಅಧಿಕವಾಗಿದೆ. ಇದೀಗ ಈ ಎಲ್ಲ ಕಂಪನಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲು ಭಾರತದ ಮತ್ತೊಂದು ದೈತ್ಯ ಕಂಪನಿಯೊಂದು ಮುಂದಾಗಿದೆ. ಹೌದು, ಭಾರತದ ಉದ್ಯಮಿ, ವಿಶ್ವದ ಸಿರಿವಂತರ ಪೈಕಿ ಒಬ್ಬರೆನಿಸಿಕೊಂಡಿರುವ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಇದೀಗ ಯುಪಿಐ ಮತ್ತು ಕ್ರೆಡಿಟ್ ಕಾರ್ಡ್ ವ್ಯವಹಾರಕ್ಕೆ ಪ್ರವೇಶಿಸಲು ತಯಾರಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಸದ್ಯ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಗೂಗಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಪ್ರಬಲ ಶಕ್ತಿಯಾಗಿ ಗುರುತಿಸಿಕೊಂಡಿವೆ. ಇದೀಗ ಯುಪಿಐ, ಕ್ರೆಡಿಟ್ ಕಾರ್ಡ್ ಸೇವೆ ಆರಂಭಿಸುವ ಮೂಲಕ ಅದಾನಿ ಗ್ರೂಪ್ ಇ-ಕಾಮರ್ಸ್ ಮತ್ತು ಪಾವತಿ ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧೆ ಒಡ್ಡುವ ಸಾಧ್ಯತೆ
ಭಾರತದಲ್ಲಿ ಈಗಾಗಲೇ ಯುಪಿಐ ಮತ್ತು ಕ್ರೆಡಿಟ್ ಕಾರ್ಡ್ ಕ್ಷೇತ್ರದಲ್ಲಿ ನೆಲೆಯೂರಿರುವ ಗೂಗಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ಗೆ ಪ್ರತಿಸ್ಪರ್ಧಿಯಾಗಿ ಅದಾನಿ ಗ್ರೂಪ್ ಇ-ಕಾಮರ್ಸ್ ಮತ್ತು ಪಾವತಿ ಕ್ಷೇತ್ರವನ್ನು ಪ್ರವೇಶಿಸುವ ಪ್ರಯತ್ನದಲ್ಲಿದೆ
ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುವ ಹಣ ಪಾವತಿ ವಿಧಾನವಾದ ಯುಪಿಐ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಪರವಾನಗಿ ಪಡೆಯಲು ಕಂಪನಿಯು ಈಗಾಗಲೇ ಕೆಲಸ ಆರಂಭಿಸಿದೆ. ಮಾತ್ರವಲ್ಲ ಅದಾನಿ ಕ್ರೆಡಿಟ್ ಕಾರ್ಡ್ ಯೋಜನೆಗಳನ್ನು ಅಂತಿಮಗೊಳಿಸಲು ಬ್ಯಾಂಕ್ಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಸರ್ಕಾರದ ಬೆಂಬಲದೊಂದಿಗೆ ಭಾರತದಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ಸಾರ್ವಜನಿಕ ಇ-ಕಾಮರ್ಸ್ ನೆಟ್ವರ್ಕ್ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ಮೂಲಕ ಆನ್ಲೈನ್ ಶಾಪಿಂಗ್ ಸೇವೆ ಒದಗಿಸಲು ಚಿಂತನೆ ನಡೆಸಲಾಗಿದೆ.
ಒಂದು ವೇಳೆ ಅನುಮತಿ ದೊರೆತರೆ ಕಂಪನಿಯ ಅದಾನಿ ಒನ್ ಅಪ್ಲಿಕೇಷನ್ ಮೂಲಕ ಸೇವೆ ಲಭಿಸಲಿದೆ. ಅದಾನಿ ಒನ್ ಅಪ್ಲಿಕೇಶನ್ ಅನ್ನು 2022ರಲ್ಲಿ ಪ್ರಾರಂಭಿಸಲಾಗಿದ್ದು, ಇದು ಪ್ರಸ್ತುತ ಹೋಟೆಲ್ ಮತ್ತು ಫ್ಲೈಟ್ ಬುಕಿಂಗ್ನಂತಹ ಪ್ರವಾಸೋದ್ಯಮ ಸೇವೆಗಳನ್ನು ಒದಗಿಸುತ್ತದೆ. ಈಗಾಗಲೇ ಅದಾನಿ ಗ್ರೂಪ್ ಬಂದರು, ವಿಮಾನ ನಿಲ್ದಾಣಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ಹೊಂದಿದ್ದು, ಇದರಲ್ಲಿನ ಗ್ರಾಹಕರನ್ನು ಸುಲಭವಾಗಿ ಸೆಳೆಯಬಹುದು ಎನ್ನುವ ಲೆಕ್ಕಾಚಾರವಿದೆ. ʼʼಸದ್ಯ ಏಷ್ಯಾದ ಎರಡನೇ ಶ್ರೀಮಂತ ವ್ಯಕ್ತಿಯಾಗಿರುವ ಅದಾನಿ ಗ್ರೂಪ್ನ ಸ್ಥಾಪಕ ಗೌತಮ್ ಅದಾನಿ ಅವರು ಶೀಘ್ರದಲ್ಲಿಯೇ ಡಿಜಿಟಲ್ ಪಾವತಿ ರಂಗಕ್ಕೆ ಪ್ರವೇಶಿಸಲು ಯೋಜನೆ ಹಾಕಿಕೊಂಡಿದ್ದಾರೆʼʼ ಎಂದು ಮೂಲಗಳು ಮಾಹಿತಿ ನೀಡಿವೆ.






