ಎನ್ಡಿಎ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಮಯ ನಿಗದಿ !

Views: 251
ನವದೆಹಲಿ:ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ-ಎನ್ಡಿಎ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಗೆಲುವು ಸಾಧಿಸಿದರೆ ಜೂನ್ 9 ರಂದು ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಮಯ ನಿಗದಿ ಮಾಡಲಾಗಿದ್ದು ಕಾರ್ಯಕ್ರಮಕ್ಕೆ ತಾತ್ಕಾಲಿಕ ಯೋಜನೆ ರೂಪಿಸಲಾಗಿದೆ .
ಈ ಬಾರಿ ರಾಷ್ಟ್ರಪತಿ ಭವನದ ಆವರಣದ ಬದಲು ಕರ್ತವ್ಯ ಪಥದಲ್ಲಿ ಪ್ರಧಾನಿ ಮತ್ತು ಇತರೆ ಕೇಂದ್ರ ಸಚಿವರ ಪ್ರಮಾಣ ವಚನ ಸಮಾರಂಭ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಲೋಕಸಭೆಗೆ 7ನೇ ಮತ್ತು ಅಂತಿಮ ಹಂತದ ಮತದಾನ ಜೂನ್ 1 ರಂದು ನಡೆಯಲಿದ್ದು ಜೂನ್ 4 ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಅದಕ್ಕಿಂತ ಮೊದಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಗೆ ಸಿದ್ಧತೆ ಮತ್ತು ರೂಪು ರೇಷೆ ಸಿದ್ದಪಡಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಾರಿ ಕಳೆದ ಎರಡು ಬಾರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳನ್ನು ಆಹ್ವಾನಿಸಲು ಉದ್ದೇಶಿಸಲಾಗಿದ್ದು ಹೀಗಾಗಿ ಕರ್ತವ್ಯ ಪಥದಲ್ಲಿ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕಾರಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಸರ್ಕಾರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ಟಾ ಯೋಜನೆಯ ಕೇಂದ್ರಬಿಂದು ಪ್ರದರ್ಶನದ ಉದ್ದೇಶವೂ ಇದಾಗಿದೆ ಎನ್ನಲಾಗಿದೆ.
“ಸರ್ಕಾರದ ಸಾಧನೆಗಳು ಮತ್ತು ಭವಿಷ್ಯದ ದೃಷ್ಟಿಕೋನ ಪ್ರದರ್ಶಿಸುವ ಹಿನ್ನೆಲೆ ಹೊಂದಿರುವುದು ಕಲ್ಪನೆ” ಹಿನ್ನೆಲೆಯಲ್ಲಿ “ಸೆಂಟ್ರಲ್ ವಿಸ್ಟಾ ಯೋಜನೆ ವಿಕಸಿತ ಭಾರತ ಅನಾವರಣಕ್ಕೆ ಸೂಕ್ತ ಸ್ಥಳ ಎಂದು ಹೇಳಲಾಗಿದ್ದು ಇದೇ ಕಾರಣಕ್ಕೆ ಕರ್ತವ್ಯ ಪಥದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಜ್ಜುಗೊಳಿಸಲಾಗುತ್ತಿದೆ
ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಪ್ರಧಾನಿ ಮತ್ತು ಇತರೆ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಿದ್ಧತೆಗಳ ಕುರಿತಂತೆ ಸುದೀರ್ಘ ಸಭೆ ನಡೆಸಿದೆ. ಈ ಸಭೆಯಲ್ಲಿ ಆಕಾಶವಾಣಿ ಮತ್ತು ದೂರದರ್ಶನ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.
ನೂತನ ಪ್ರಧಾನಿ ಅವರ ಪ್ರಮಾಣ ವಚನ ಸಮಾರಂಭದ ನೇರ ಪ್ರಸಾರ ಮಾಡಲು ಸುಮಾರು 100 ಕ್ಯಾಮೆರಾ ಬಳಕೆ ಮಾಡಲು ನಿರ್ಧರಿಸಲಾಗಿದ್ದು ಜೂನ್ 4 ರಂದು ಫಲಿತಾಂಶ ಬಂದ ನಂತರ ಸಮಾರಂಭದ ಸಿದ್ದತೆಗೆ ಕನಿಷ್ಠ ನಾಲ್ಕೈದು ದಿನ ಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವ ಅತಿಥಿಗಳನ್ನು ಶಿಷ್ಟಾಚಾರದ ಪ್ರಕಾರ ಆಹ್ವಾನ, ಸಿದ್ದತೆ ನಡೆಸಲಾಗಿದೆ ಎಂದು ಎಂದು ಪ್ರಸಾರ ಭಾರತಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೌರವ್ ದ್ವಿವೇದಿ ಹೇಳಿದ್ದಾರೆ.
ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಗ್ಗೆ ಪ್ರತಿಕ್ರಿಯೆ ನೀಡಲು ಪ್ರಧಾನಮಂತ್ರಿಗಳ ಕಾರ್ಯಾಲಯ ನಿರಾಕರಿಸಿದೆ.ಈಗಾಗಲೇ ಜೂನ್ 13 ಮತ್ತು 14 ರಂದು ಇಟಲಿಯಲ್ಲಿ ನಡೆಯಲಿರುವ ಜಿ-7 ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಆಹ್ವಾನವನ್ನು ಸ್ವೀಕರಿಸಿದ್ದಾರೆ ಎಂದು ಮೂಲಗಳು ಖಚಿತ ಪಡಿಸಲಾಗಿದೆ.






