ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿಕೆಶಿ ಸೋದರನಿಗೆ ಪಟ್ಟ ಕಟ್ಟುವ ಪ್ರಯತ್ನ! ಹಿರಿಯ ಕಾಂಗ್ರೆಸಿಗರ ಅಪಸ್ವರ

Views: 43
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅವರೇ ಸಿದ್ಧತೆ ಶುರು ಮಾಡಿದ್ದಾರೆ.ಅಧ್ಯಕ್ಷ ಸ್ಥಾನಕ್ಕೆ ಸಂಸದ ಡಿ.ಕೆ.ಸುರೇಶ್ ಅವರನ್ನು ಕೂರಿಸುವ ಗಂಭೀರ ಪ್ರಯತ್ನ ನಡೆಯುತ್ತಿರುವಾಗಲೇ ಸಿಎಂ ಬಣದ ಅನೇಕ ಮುಖಂಡರು ಅಪಸ್ವರ ಎತ್ತಿದ್ದಾರೆ.
ಭವಿಷ್ಯದಲ್ಲಿ ಪಕ್ಷ ತಮ್ಮ ಹಿಡಿತದಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸೋದರನಿಗೆ ಪಟ್ಟ ಕಟ್ಟುವ ಪ್ರಯತ್ನ ಸರಿಯಲ್ಲ ಎನ್ನುವುದು ಅನೇಕ ಹಿರಿಯ ಕಾಂಗ್ರೆಸ್ಸಿಗರ ಅಭಿಪ್ರಾಯವಾಗಿದೆ. ಪಕ್ಷದಲ್ಲಿ ದುಡಿದಿರುವ ಸಾಕಷ್ಟು ಮಂದಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಸಮರ್ಥರಿದ್ದಾರೆ. ಹಾಗಾಗಿ ಹೈಕಮಾಂಡ್ ಕೂಡಾ ಇಂತಹ ಪ್ರಸ್ತಾವನೆಯನ್ನು ಒಪ್ಪುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎನ್ನುವ ಸಚಿವ ಕೆ.ಎನ್. ರಾಜಣ್ಣ ಅವರ ಹೇಳಿಕೆ ಪಕ್ಷದ ವಲಯದಲ್ಲಿ ಚರ್ಚೆ ಜೋರಾಗಿದೆ.
ಲೋಕಸಭಾ ಚುನಾವಣೆವರೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರೇ ಕಾರ್ಯನಿರ್ವಹಿಸಲಿದ್ದಾರೆ. ಆ ಬಳಿಕ ನೋಡೋಣ ಎಂದಿದ್ದ ವರಿಷ್ಠರ ಮಾತಿನ ಜೊತೆಗೆ ಇತ್ತೀಚೆಗೆ ಖುದ್ದು ಡಿಸಿಎಂ ಶಿವಕುಮಾರ್ ಕೂಡಾ `ಪಕ್ಷಾಧ್ಯಕ್ಷನಾಗಿ ನಾನು ಇನ್ನೆಷ್ಟು ಸಮಯ ಇರುತ್ತೇನೋ ಗೊತ್ತಿಲ್ಲ ಭದ್ರಬುವಾದಿ ಹಾಕಬೇಕಿದೆ’ ಎಂದಿದ್ದರು. ಈ ಹೇಳಿಕೆ ಪಕ್ಷದ ಆಂತರಿಕವಲಯದಲ್ಲಷ್ಟೇ ಅಲ್ಲ ಸಾರ್ವಜನಿಕವಾಗಿಯೂ ಡಿಕೆಶಿ ಪಕ್ಷದ ಸಾರಥ್ಯ ತ್ಯಜಿಸಲು ಮಾನಸಿಕವಾಗಿ ಸಜ್ಜಾಗಿದ್ದಾರೆಂದೇ ವಿಶ್ಲೇಷಸಲಾಗುತ್ತಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಶಾಶ್ವತವಾಗಿ ಮತ್ತು ಸಂಘಟನಾತ್ಮಕವಾಗಿ ಬೇರೂರುವ ನಿಟ್ಟಿನಲ್ಲಿ ಕೆಲವು ಕಾರ್ಯಯೋಜನೆಗಳು ಹಾಕಿಕೊಳ್ಳಲಾಗುತ್ತಿದೆ. ಇದು ಅದರ ಪ್ರಮುಖ ಭಾಗ ಎಂದು ಡಿಕೆಶಿ ಹೈಕಮಾಂಡ್ ಮುಂದೆ ಡಿಕೆಸುರೇಶ್ ಅವರನ್ನು ಪಕ್ಷದ ಸಾರಥ್ಯಕ್ಕೆ ಪರಿಗಣಿಸಲು ಸಮರ್ಥನೆ ಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.






