ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಉಚ್ಛಾಟನೆಗೆ ಕ್ಷಣಗಣನೆ, ಗೊಂದಲದಲ್ಲಿ ಕಾರ್ಯಕರ್ತರು!

Views: 134
ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದೆ. ಇದರಿಂದ ಮನನೊಂದ ರಘುಪತಿ ಭಟ್ ಕಾರ್ಯಕರ್ತರ ಬೆಂಬಲದೊಂದಿಗೆ ಪಕ್ಷೇತರರಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದಾರೆ.ಆದರೆ ಇದೀಗ ಪಕ್ಷದ ಶಿಸ್ತು ಉಲ್ಲಂಘನೆ ಹಿನ್ನಲೆಯಲ್ಲಿ ಉಚ್ಛಾಟನೆಯ ಕ್ಷಣಗಣನೆಯಲ್ಲಿದ್ದಾರೆ.
ರಘುಪತಿ ಭಟ್ ಬದಲಿಗೆ ಧನಂಜಯ್ ಸರ್ಜಿ ಅವರಿಗೆ ಟಿಕೆಟ್ ನೀಡಿರುವುದು ರಘುಪತಿ ಭಟ್ ಅವರ ಬೇಸರಕ್ಕೆ ಕಾರಣವಾಗಿತ್ತು. ಪಕ್ಷೇತರವಾಗಿ ಕಣದಲ್ಲಿರುವ ರಘುಪತಿ ಭಟ್ ಅವರನ್ನು ಮನವೊಲಿಸುವ ಪ್ರಯತ್ನ ಈಗಾಗಲೇ ನಡೆದಿದ್ದರೂ ಕೂಡ ಯಾವುದಕ್ಕೂ ಬಗ್ಗದ ಭಟ್ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ನೊಟೀಸ್ ನೀಡಿದೆ.
ರಘುಪತಿ ಭಟ್ ಪರಮಾಪ್ತ ಎನಿಸಿಕೊಂಡ ಯಶ್ ಪಾಲ್ ಸುವರ್ಣ, ರಘುಪತಿ ಭಟ್ ವಿರುದ್ಧ ಮಾತನಾಡಿರುವುದು ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದೆ. ಇನ್ನೊಂದು ಮೂಲದ ಪ್ರಕಾರ ರಘುಪತಿ ಭಟ್ ಅವರ ಟಿಕೆಟ್ ತಪ್ಪಲು ಯಶ್ ಪಾಲ್ ಸುವರ್ಣ ಕಾರಣ ಎನ್ನುವ ಆರೋಪ ರಘುಪತಿ ಭಟ್ ಅಭಿಮಾನಿ ಬಳಗದಿಂದ ಕೇಳಿ ಬರುತ್ತಿದೆ.
ರಾಜಕೀಯ ಜೀವನದ ಪ್ರಾರಂಭದಿಂದ ಹಿಡಿದು ಇಲ್ಲಿಯವರೆಗೆ ಕೈ ಹಿಡಿದು ನಡೆಸಿದ ರಘುಪತಿ ಭಟ್ ವಿರುದ್ಧ ಯಶ್ ಪಾಲ್ ಸುವರ್ಣ ಹೋಗಿದ್ದಾರೆ ಎನ್ನುವ ಆರೋಪ ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಏನೇ ಆದರೂ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಿಂದಾಗಿ ಉಡುಪಿಯ ಬಿಜೆಪಿಯಲ್ಲಿರುವ ಬಿರುಕುಗಳು ದೊಡ್ಡದಾಗುತ್ತಿದೆ. ರಾಜ್ಯ ನಾಯಕರು ಈ ಬಗ್ಗೆ ಗಮನ ಹರಿಸಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಒಗ್ಗೂಡಿಸಬೇಕು ಎನ್ನುವ ಆಗ್ರಹ ಕಾರ್ಯಕರ್ತರ ವಲಯದಲ್ಲಿದೆ.






